ಪಾವೂರಿನಲ್ಲಿದ್ದಾನೆ ಗೋವುಪ್ರೇಮಿ ಮುಸ್ಲಿಂ ಬಾಲಕ
ಮಂಗಳೂರು : ಮಕ್ಕಳು ಶಾಲಾ ರಜಾದಿನಗಳನ್ನು ಅಜ್ಜಿಯ ಮನೆಯಲ್ಲೋ, ನೆಂಟರ ಮನೆಯಲ್ಲೇ ಕಳೆಯೋದು ಮಾಮೂಲಿ. ಆದರೆ ಇಲ್ಲೊಬ್ಬ ಬಾಲಕ ರಜೆ ಸಿಕ್ಕಿದೊಡನೆ ಮನೆಯಲ್ಲಿ ಸಾಕಲ್ಪಡುವ ಪ್ರಾಣಿ-ಪಕ್ಷಿಗಳ ಜೊತೆ ಕಾಲ ಕಳೆಯುತ್ತಾನೆ. ದನ-ಕರುಗಳನ್ನು ಇಷ್ಟಪಡುವ ಪಾವೂರಿನ ಸಾಬಿತ್ ಬಗ್ಗೆ ಊರಿನ ಜನರೂ ಮೆಚ್ಚುಗೆಯ ಮಾತನ್ನಾಡುತ್ತಾರೆ.
ಪಾವೂರು ಗ್ರಾಮದ ಇನೋಳಿ ನಿವಾಸಿ ಬಶೀರ್ ಹಾಗೂ ಆಸಿಯಾ ಎಂಬುವರ ಪುತ್ರ ಸಾಬಿತ್ ಬೇರೆ ಮಕ್ಕಳಂತಲ್ಲ. ಈತನ ವಯಸ್ಸು ೧೨. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಈತನ ಗೋಪ್ರೇಮ ಇತರರಿಗೆ ಮಾದರಿಯಾಗಿದೆ. ಈತನಿಗೆ ಚಿಕ್ಕಂದಿನಲ್ಲಿಯೇ ಪ್ರಾಣಿ, ಪಕ್ಷಿಗಳೆಂದರೆ ಪಂಚಪ್ರಾಣ. ದಿನಾ ಮುಂಜಾನೆ ಹಸುವಿನ ಹಾಲು ಕರೆದು ಬಳಿಕ ಅದನ್ನು ಉಪಚರಿಸಿ ಶಾಲೆಗೆ ತೆರಳುವುದು ಈತನ ಹವ್ಯಾಸ. ತನ್ನ ಗೋವಿನ ಪ್ರೇಮಕ್ಕೆ ತಂದೆ ಬಶೀರ್ ಹಾಗೂ ದೊಡ್ಡಪ್ಪ ಶಾಫಿ ಕೂಡಾ ಪ್ರೋತ್ಸಾಹ ನೀಡುತ್ತಿದ್ದಾರೆ ಅಂತಾನೆ ಸಾಬಿತ್.
ಗೋವು ಸಾಕಣೆ ಮಾತ್ರವಲ್ಲ, ಸಾಬಿತ್ ಮನೆಯಲ್ಲಿ ೫೦ಕ್ಕಿಂತಲೂ ಹೆಚ್ಚು ವಿದೇಶಿ ತಳಿಯ ಪಾರಿವಾಳ, ಕೋಳಿ, ಆಡುಗಳೂ ಇವೆ. ಶಾಲೆಯ ಅನ್ನದಾಸೋಹದಲ್ಲಿ ಮಿಕ್ಕಿದ ಅನ್ನವನ್ನು ಚರಂಡಿಗೆಸೆಯಲು ಬಿಡದೆ ಬಕೆಟ್‌ನಲ್ಲಿ ತುಂಬಿಸಿ ತಂದು ಅದನ್ನೇ ಪಕ್ಷಿಗಳಿಗೆ ಉಣಬಡಿಸುತ್ತಾನೆ ಸಾಬಿತ್. ಮೂಕ ಪ್ರಾಣಿಗಳಿಗಳಾದರೇನು ಅವುಗಳಿಗೂ ನಮ್ಮಂತೆಯೇ ಜೀವಿಸುವ ಹಕ್ಕಿದೆ, ಅವುಗಳನ್ನು ನೋಯಿಸದೆ ಪ್ರೀತಿಸಿದರೆ ಅವುಗಳೂ ನಮ್ಮನ್ನು ಪ್ರೀತಿಸುತ್ತವೆ ಎನ್ನುವ ಸಾಬಿತ್ ಮಾತು ನಿಜಕ್ಕೂ ಅರ್ಥಪೂರ್ಣ ಅಲ್ವಾ?
-sanjevani
loading...
No comments