Breaking News

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತ ಆರೋಪಿ ಸಂತೋಷಗೆ ಜಾಮೀನು



ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ  ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಬಿಂಬಿತನಾಗಿ ನಾಲ್ಕು ವರ್ಷಗಳ ಹಿಂದೆ ಬಂಧಿತನಾಗಿದ್ದ ಸಂತೋಷ್ ರಾವ್ ಎಂಬ ವ್ಯಕ್ತಿಗೆ ಸಿಬಿಐ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ಪ್ರಕರಣದ ಇನ್ನಷ್ಟು ತನಿಖೆಗೆ ಇತ್ತೀಚೆಗೆ ಹೈಕೋರ್ಟ್ ನೀಡಿದ ತಡೆಯಾಜ್ಞೆಯ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ಪ್ರಕರಣವನ್ನು ಆರಂಭದಲ್ಲಿ ಸಿಐಡಿ ವಿಚಾರಣೆ ನಡೆಸಿದ್ದರೆ, ನಂತರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ಈ ಪ್ರಕರಣದಲ್ಲಿ ಬಂಧಿತನಾಗಿರುವ ಏಕೈಕ ವ್ಯಕ್ತಿ ಕುಂದಾಪುರದ ಗುತ್ತಿಗೆ ಕಾರ್ಮಿಕ ಸಂತೋಷ್ ರಾವ್ ಎಂಬವನನ್ನು  ಆರೋಪಿ ಎಂದು ಹೆಸರಿಸಿತ್ತು.

ಆದರೆ ಈ ಪ್ರಕರಣದಲ್ಲಿ ಒಬ್ಬನಿಗಿಂತ ಹೆಚ್ಚಿನ ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು ಸಂತೋಷನೇ ಆರೋಪಿ ಎಂದು ಸಾಬೀತುಪಡಿಸಲು ಯವುದೇ ಪ್ರತ್ಯಕ್ಷ ಸಾಕ್ಷಿಯಿಲ್ಲ ಎಂದು ಸಿಬಿಐ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ವೈದ್ಯಕೀಯ ಪರೀಕ್ಷೆ  ಹಾಗೂ ಎಫ್ಫೆಎಸ್ಸೆಲ್ ಪರೀಕ್ಷಾ ಫಲಿತಾಂಶಗಳು ಈ ಅಪರಾಧದಲ್ಲಿ ಆತನ ಶಾಮೀಲಾತಿಯನ್ನು ಸಾಬೀತುಪಡಿಸಿಲ್ಲವಾದುದರಿಂದ ಹಾಗೂ ಆತ ಈಗಾಗಲೇ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿರುವುದರಿಂದ  ಆತನ ಜಾಮೀನು ಮನವಿಗೆ ಸ್ಪಂದಿಸಿದ  ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ ಎಂದು  ವಕೀಲ ಭಾಸ್ಕರ್ ಹೊಳ್ಳ ಹೇಳಿದ್ದಾರೆ.

 ಪ್ರಕರಣ ದುರ್ಬಲ ಕಾರಣಗಳೇನು ?

ಆರೋಪಿ  ಸಂತೋಷನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದ ಇಬ್ಬರು ಸಾಕ್ಷಿಗಳು ಇದೀಗ ಜೀವಂತವಾಗಿಲ್ಲ. ರವಿ ಪೂಜಾರಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದರೆ, ಇನ್ನೊಬ್ಬ ಸಾಕ್ಷಿ ಗೋಪಾಲಕೃಷ್ಣ ಅಸೌಖ್ಯದಿಂದ ಸಾವನ್ನಪ್ಪಿದ್ದಾನೆ.

ಸಂತೋಷನ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಫಿಮೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ ಹಾಗೂ ಆತನ ಖಾಸಗಿ ಭಾಗಗಳಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಕಂಡುಬಂದಿತ್ತು. ಆತ ಧರಿಸಿದ ಬಟ್ಟೆಗಳನ್ನು ಸಿಬಿಐ ವಶಪಡಿಸಿಕೊಂಡು ಡಿ ಎನ್ ಎ ಮತ್ತು ಎಫ್ಫೆಎಸ್ಸೆಲ್ ಪರೀಕ್ಷೆಗೊಳಪಡಿಸಿದ್ದರೂ ಯವುದೇ ಪುರಾವೆ ದೊರೆತಿರಲಿಲ್ಲ.  ಸೌಜನ್ಯಾಳ ಉಗುರುಗಳಲ್ಲಿ ದೊರೆತ ಡಿ ಎನ್ ಎ ಮಾದರಿಯು  ಸಂತೋಷ್ ಡಿಎನ್‍ಎ ಮಾದರಿಗೆ ತಾಳೆಯಾಗಿಲ್ಲ.



ಸೌಜನ್ಯಾಳ  ಶವ ಪರೀಕ್ಷೆ ನಡೆಸಿದ್ದ  ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೂಡ ಈ ಪ್ರಕರಣದಲ್ಲಿ ಒಬ್ಬನಿಗಿಂತ ಹೆಚ್ಚು ಜನರು ಶಾಮೀಲಾಗಿರಬೇಕೆಂದು ಹೇಳಿದ್ದರು. ಈ ವರದಿಯಾಧಾರದಲ್ಲಿ  ಹಾಗೂ ಇನ್ನೊಬ್ಬ ವೈದ್ಯರ ಹೇಳಿಕೆಯನ್ನು ಪರಿಗಣಿಸಿ ಸಿಬಿಐ ವಿಶೇಷ ನ್ಯಾಯಾಲಯ ಚಾರ್ಜ್ ಶೀಟಿನಲ್ಲಿ  ಉಲ್ಲೇಖವಿಲ್ಲದ  ಮೂರು ಮಂದಿ-ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಎಂಬವರಿಗೆ  ಕಳೆದ ನವೆಂಬರ್ ತಿಂಗಳಲ್ಲಿ ಸಮನ್ಸ್ ಕಳುಹಿಸಿತ್ತು. ಈ ಮೂರು ಮಂದಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ ಸೌಜನ್ಯ ತಂದೆ ಚಂದಪ್ಪ ಗೌಡ  ಕೂಡ ತಮ್ಮ ಅಪೀಲಿನಲ್ಲಿ ಉಲ್ಲೇಖಿಸಿದ್ದರು.

-kale

loading...

No comments