ಗೋ ರಕ್ಷಕರಿಗೆ ಸುಪ್ರೀಂ ಕೋರ್ಟ್ ನೋಟಿಸ್
ನವದೆಹಲಿ : ಗೋವು ಜಾಗರೂಕತೆಯ ಪ್ರಕರಣಗಳು ಹೆಚ್ಚುತ್ತಿರುವ ಬಿಜೆಪಿ ಆಡಳಿತವಿರುವ 6 ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ. ಆರು ರಾಜ್ಯಗಳೆಂದರೆ ರಾಜಾಸ್ತಾನ್, ಜಾರ್ಖಂಡ್, ಚತ್ತೀಸ್‌ಘಡ, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಗೋವಾ. ರಾಜಾಸ್ತಾನದ ಆಳ್ವಾರ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬಗ್ಗೆ ಭುಗಿಲೆದ್ದ ಆಕ್ರೋಶ ಮತ್ತು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಪಾರ್ಲಿಮೆಂಟ್ ಹೊರಗೆ ಈ ಸಂಬಂಧ ಮಾಡಿದ ಹೇಳಿಕೆಗಳ ನಂತರ ಸುಪ್ರೀಂಕೋರ್ಟ್ ಈ ಆರೂ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ.
ವಸುಂಧರ ರಾಜೇ ನೇತೃತ್ವದಲ್ಲಿರುವ ರಾಜಾಸ್ತಾನದ ಸರ್ಕಾರಕ್ಕೆ ಈ ನೋಟಿಸ್‌ಗೆ ಉತ್ತರಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. 55 ವರ್ಷದ ವ್ಯಕ್ತಿಯನ್ನು ಆಳ್ವಾರ್‌ನಲ್ಲಿ ಕೊಂದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ತಾವು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಹಸುಗಳನ್ನು ಹಿಂಸಿಸುತ್ತಿದ್ದುದನ್ನು ಸಹಿಸಲಾರದೆ ಈ ಕೃತ್ಯವೆಸಗಿದ್ದಾಗಿ ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ವೀಡಿಯೊದಲ್ಲಿ ಐವರು ಅಪರಾಧಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಮೂವರು ಪೆಹ್ಲುಖಾನ್‌ಗೆ ಹೊಡೆಯುತ್ತಿದ್ದರೆ ಇತರ ಇಬ್ಬರು ಸನಿಹದಲ್ಲೇ ನಿಂತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಈ ವಿಷಯ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ಕಾಂಗ್ರೆಸ್‌ನ ಮಧುಸೂದನ್ ಮಿಸ್ತ್ರಿ, ಈ ವಿಚಾರ ಪ್ರಸ್ತಾಪಿಸಿ ಸರ್ಕಾರದ ಉತ್ತರ ಬಯಸಿದಾಗ ನಕ್ವಿ ಮಾತನಾಡಿ ಅಂತಹ ಯಾವುದೇ ವರದಿ ಮಾಧ್ಯಮಗಳಲ್ಲಿ ಬಂದಿಲ್ಲ. ಅಲ್ಲಿನ ರಾಜ್ಯಸರ್ಕಾರ ಈ ಘಟನೆ ಖಂಡಿಸಿದೆ ಎಂದು ಹೇಳಿದ್ದರು.
ಆದರೆ, ಸಂಸತ್ತಿನ ಹೊರಗೆ ಬೇರೆಯದೇ ಹೇಳಿಕೆ ನೀಡಿ ನಾನು ಆಳ್ವಾರ್ ಘಟನೆ ಪ್ರಸ್ತಾಪಿಸಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎಂದು ಹೇಳಿದ್ದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ರಾಜಾಸ್ತಾನದ ಪ್ರಕರಣವನ್ನು ಇತರ ರಾಜ್ಯಗಳಿಗೂ ಹೋಲಿಸಲು ಜನ ಪ್ರಯತ್ನಿಸುತ್ತಿದ್ದಾರೆಂದೂ ಅವರು ದೂರಿದರು. ಯಾವುದೇ ಕಾರಣಕ್ಕೂ ತಮ್ಮ ಸರ್ಕಾರ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದೂ ನಕ್ವಿ ಸ್ಪಷ್ಟಪಡಿಸಿದರು.
loading...
No comments