Breaking News

ಉಗ್ರ ಚಟುವಟಿಕೆ ಕರಾವಳಿಯ ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ




ಮಂಗಳೂರು : 2008ರಲ್ಲಿ ಇಂಡಿಯನ್ ಮುಜಾಹಿದ್ದೀನ್  ಭಯೋತ್ಪಾದನಾ ಸಂಘಟನೆಗೆ ಬಾಂಬ್'ಗಳನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಸುಭಾಷ್ ನಗರ ನಿವಾಸಿ ಸೈಯ್ಯದ್ ಮಹಮ್ಮದ್ ನೌಶಾದ್ (25), ಹಳೆಯಂಗಡಿ ನಿವಾಸಿ ಅಹಮ್ಮದ್ ಬಾವ ಅಬೂಬಕ್ಕರ್(33) ಮತ್ತು ಉಚ್ಚಿಲ ನಿವಾಸಿ ಫಕೀರ್ ಅಹಮ್ಮದ್(46)ಗೆ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿ  ಜೀವಾವಧಿ ಶಿಕ್ಷೆ ವಿಧಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧ ಪಟ್ಟ ಉಳಿದ ನಾಲ್ವರನ್ನು ದೋಷ ಮುಕ್ತಗೊಳಿಸಿ ಏಪ್ರಿಲ್ 10ರಂದು ತೀರ್ಪು ನೀಡಿತ್ತು. ಪ್ರಕರಣದಲ್ಲಿ ಬಂಧಿತರಾಗಿದ್ದ ಉಳ್ಳಾಲ ಮುಕ್ಕಚ್ಚೇರಿ ಮಹಮ್ಮದ್ ಅಲಿ, ಅವರ ಪುತ್ರ ಜಾವೇದ್ ಅಲಿ, ಬಂಟ್ವಾಳ ಬೋಳಂತೂರು ಮಹಮ್ಮದ್ ರಫೀಕ್ ಹಾಗೂ ಶಬ್ಬೀರ್ ಭಟ್ಕಳ್ ಎಂಬವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ದೋಷ ಮುಕ್ತಗೊಳಿಸಲಾಗಿದೆ. ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿ ದೇವಿ ಅವರ ಸಮುಖ  ಈ ಪ್ರಕರಣ ವಿಚಾರಣೆ ನಡೆದಿತ್ತು. ಈ ಆರೋಪಿಗಳು 2008 ರಲ್ಲಿ ದೇಶದ ಹಲವು ಕಡೆಗಳಿಗೆ ಬಾಂಬ್ ಪೂರೈಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದರು.

ಘಟನೆ ಹಿನ್ನಲೆ

ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ೨೦೦೮ ಅಕ್ಟೋಬರ್ ೩ರಂದು ಮುಂಜಾನೆ ಮಂಗಳೂರು ಮತ್ತು ಮುಂಬಯಿ ಪೊಲೀಸರು ಕರ್ನಾಟಕ ನಕ್ಸಲ್ ನಿಗ್ರಹ ಪಡೆಯ ಸಹಕಾರದಲ್ಲಿ ಮುಂಜಾನೆ ವೇಳೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು. ಪ್ರಥಮವಾಗಿ ಉಳ್ಳಾಲದ ಮುಕ್ಕಚ್ಚೇರಿಯ ಮಹಮದ್ ಅಲಿ ಮತ್ತು ಅವರ ಪುತ್ರ ಜಾವೇದ್ ಅಲಿ ಅವರ ಮನೆಗೆ ದಾಳಿ ಮಾಡಿ ಅವರಿಬ್ಬರನ್ನು ಬಂಧಿಸಿದ್ದರು. ಬಳಿಕ ಮಹಮದ್ ಅಲಿ ಮತ್ತು ಜಾವೇದ್ ಅಲಿ ಅವರ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿರುವ ರಿಯಾಜ್ ಭಟ್ಕಳನ ಬಾಡಿಗೆ ಮನೆಗೆ ದಾಳಿ ನಡೆಸಿದ್ದರು. ಆದರೆ ಅಷ್ಟರಲ್ಲಿ ಮಾಹಿತಿ ಲಭಿಸಿದ್ದರಿಂದ ರಿಯಾಜ್ ಭಟ್ಕಳ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಅನಂತರ ಮಂಗಳೂರಿನ ಪಾಂಡೇಶ್ವರದ ಸುಭಾಸ್ ನಗರ ಹಾಗೂ ಇತರ ಕಡೆಗೆ ದಾಳಿ ಮಾಡಿ ಫಕೀರ್ ಅಹ್ಮದ್, ಶಬೀರ್ ಮೌಲಾನಾ, ಮಹಮದ್ ರಫೀಕ್, ಅಹ್ಮದ್ ಬಾವಾ ಯಾನೆ ಅಬೂಬಕರ್ ಮತ್ತು ಸೈಯದ್ ಮಹಮದ್‌ನನ್ನು ಬಂಧಿಸಿದ್ದರು. ಬಂಧಿತ ೭ ಮಂದಿಯಲ್ಲಿ ೪ ಮಂದಿ ಕ್ರಮೇಣ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಶಬೀರ್‌ನ ಜಾಮೀನು ಅರ್ಜಿಯನ್ನು ನ್ಯಾಯಾ ಲಯ ತಿರಸ್ಕರಿಸಿತ್ತು.ದಾಳಿ ಕಾರ್ಯಾಚರಣೆ ಸಂದರ್ಭದಲ್ಲಿ ಮುಹಮ್ಮದ್ ಅಲಿ, ಆತನ ಪುತ್ರ ಜಾವೇದ್ ಅಲಿ, ನೌಶಾದ್ ಮತ್ತು ಅಹ್ಮದ್ ಬಾವಾ ಅವರಿಂದ ೫ ಬಾಂಬ್, ೧೧.೩೯ ಲಕ್ಷ ರೂ. ನಗದು, ೧ ಬೈಕ್, ಗುಜರಾತ್‌ನ ನಕ್ಷೆ, ೨೧ ಮೊಬೈಲ್ ಫೋನ್ ಸೆಟ್, ಅನೇಕ ಸಿಮ್ ಕಾರ್ಡ್‌ಗಳು, ಜೆಹಾದ್ ಸಾಹಿತ್ಯ, ಲಾಪ್‌ಟಾಪ್, ಹಾರ್ಡ್ ಡಿಸ್ಕ್, ೪ ಪಾಸ್‌ಪೋರ್ಟ್ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ಕಾರ್ಯಾಚರಣೆಯು ಮಂಗಳೂರಿನಲ್ಲಿ ಶಂಕಿತ ಉಗ್ರರ ನೆಲೆ ಇತ್ತೆಂಬುದನ್ನು ಬಹಿರಂಗಪಡಿಸಿತ್ತು. ಮಂಗಳೂರು ಮತ್ತು ಸುತ್ತಮುತ್ತ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸುಳಿವು ಲಭ್ಯವಾಗಿತ್ತು. ಇಂಡಿಯನ್ ಮುಜಾಹಿದೀನ್‌ನ ಸಹ ಸ್ಥಾಪಕ ರಿಯಾಜ್ ಭಟ್ಕಳ ಮತ್ತು ಇತರ ಶಂಕಿತ ಉಗ್ರರ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿತ್ತು. ಆಗ ಪಶ್ಚಿಮ ವಲಯದ ಐಜಿಪಿ ಆಗಿದ್ದ ಎ.ಎಂ. ಪ್ರಸಾದ್ ಮಾರ್ಗದರ್ಶನದಲ್ಲಿ ದ.ಕ. ಜಿಲ್ಲಾ ಎಸ್‌ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನೂರಕ್ಕೂ ಮಿಕ್ಕಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿಸಿಐಬಿ ಇನ್ಸ್‌ಪೆಕ್ಟರ್ ಆಗಿದ್ದ ಡಾ|ಎಚ್.ಎನ್. ವೆಂಕಟೇಶ ಪ್ರಸನ್ನ ಪ್ರಕರಣ ದಾಖಲಿಸಿದ್ದರು. ಆಗ ಉಳ್ಳಾಲ ಪಿಎಸ್‌ಐ ಆಗಿದ್ದ ಶಿವಪ್ರಕಾಶ್ ಪ್ರಾಥಮಿಕ ತನಿಖೆಯನ್ನು ಹಾಗೂ ಅನಂತರದ ತನಿಖೆಯನ್ನು ಪಣಂಬೂರು ಡಿವೈಎಸ್‌ಪಿ ಆಗಿದ್ದ ಜಯಂತ್ ವಿ. ಶೆಟ್ಟಿ ಅವರು ನಡೆಸಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
loading...

No comments