ಟ್ರಿಪಲ್ ತಲಾಕ್ ಹೆಸರಲ್ಲಿ ಶೋಷಣೆ ನಿಲ್ಲಲಿ : ಮೋದಿ
ಭುವನೇಶ್ವರ : ‘ತ್ರಿವಳಿ ತಲಾಖ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಅವರಿಗೆ ನ್ಯಾಯ ದೊರೆಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು.
ಆದರೆ, ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದಲ್ಲಿ ‘ಸಂಘರ್ಷ’ ಉಂಟು ಮಾಡುವ ಪ್ರಯತ್ನ ಮಾಡಬಾರದು ಎಂದು ಹೇಳಿದ ಅವರು ‘ಸಾಮಾಜಿಕ ಜಾಗೃತಿ ಮೂಲಕ ಇದನ್ನು ನಿಭಾಯಿಸಬೇಕು’ ಎಂದು ಕರೆ ನೀಡಿದರು.
ಭುವನೇಶ್ವರದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಪದ್ಧತಿಯಿಂದಾಗಿ ಸಂತ್ರಸ್ತರಾದವರನ್ನು ಭೇಟಿ ಮಾಡಿ ಅವರಲ್ಲಿ ಜಾಗೃತಿ ಮೂಡಿಸುವಂತೆ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಿದರು.
‘ಈ ಮಹಿಳೆಯರನ್ನು ಭೇಟಿ ಮಾಡುವ ಅಗತ್ಯವಿದೆ. ಆದರೆ, ಅವರನ್ನು ಪ್ರಚೋದಿಸಬಾರದು ಅಥವಾ ಅವರು ತಮ್ಮ ಧರ್ಮದ ವಿರುದ್ಧವಾಗಿ ಹೋಗುವಂತೆ ಮಾಡಬಾರದು’ ಎಂದು ಕಿವಿ ಮಾತು ಹೇಳಿದರು.
ಕಾರ್ಯಕಾರಿಣಿ ನಂತರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ತ್ರಿವಳಿ ತಲಾಖ್‌ನಿಂದಾಗಿ ಮುಸ್ಲಿಂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಮೋದಿ ಹೇಳಿದ್ದನ್ನು ದೃಢಪಡಿಸಿದರು.
‘ಅವರು (ಮೋದಿ) ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರು. ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯಸಿಗಬೇಕು. ಯಾರೊಬ್ಬರನ್ನೂ ಶೋಷಿಸಬಾರದು ಎಂಬುದಾಗಿ ಪ್ರಧಾನಿ ಹೇಳಿದರು’ ಎಂದು ಗಡ್ಕರಿ ವಿವರಿಸಿದರು.
ಅಭಿವೃದ್ಧಿಗೆ ಬದ್ಧ: 2022ರ ಹೊತ್ತಿಗೆ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಮೂಲಕ ಹೊಸ ಭಾರತದ ನಿರ್ಮಾಣಕ್ಕಾಗಿ ‘ಉದ್ದ ಜಿಗಿತ’ ಮಾಡಲು ಇದು ಸೂಕ್ತ ಕಾಲ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
-prajavani
loading...
No comments