ಅಶ್ವಗಂಧವನ್ನು ಹಿತ್ತಿಲ ಮದ್ದು ಆಗಿ ಉಪಯೋಗಿಸಿ
ಸಹಸ್ರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಔಷಧವಾಗಿ ಬಳಕೆಯಲ್ಲಿರುವ ಅಶ್ವಗಂಧಾ ಅಮೂಲ್ಯವಾದ ಗುಣಗಳನ್ನು ಹೊಂದಿದೆ. ಸುಮಾರು ಏಳು ಅಡಿಯ ವರೆಗೂ ಎತ್ತರವಾಗುವ ಅದರ ಗಿಡವನ್ನು ನಮ್ಮ ಮನೆಯ ಹಿತ್ತಲಿನಲ್ಲಿಯೂ ಬೆಳೆಯಬಹುದು. ಇದರ ಬೇರು ಹಲವಾರು ವ್ಯಾಧಿಗಳಿಗೆ ಮದ್ದಾಗಿದೆ. ಎಲೆ ಮತ್ತು ಹಣ್ಣುಗಳು ಕೂಡ ದೇಹದ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಪೆನ್ಸಿಲಿನ್‌ನಂತೆಯೇ ಅದೊಂದು ಸಮರ್ಥ ಅಂಟಿಬಯೋಟಿಕ್ ಆಗಿದ್ದು ಸೋಂಕು ನಿವಾರಣೆಯ ಸಾಮರ್ಥ್ಯವನ್ನು ಹೊಂದಿದೆ. ಮನೆಯಂಗಳದಲ್ಲಿ ಅದರ ಗಿಡವಿದ್ದರೆ ಕೀಟಗಳು ದೂರ ಓಡುತ್ತವೆ.
* ಅಶ್ವಗಂಧಾ ಎಲೆಗಳ ಚೂರ್ಣ ಪುರುಷತ್ವ ವೃದ್ಧಿಗೆ ಸಹಕಾರಿ. ಕಹಿ ರುಚಿಯಿರುವ ಅದನ್ನು ಒಂದೆರಡು ಚಮಚದಷ್ಟು ಹಸುವಿನ ಬಿಸಿಹಾಲಿನಲ್ಲಿ ಕದಡಿ ದಿನಕ್ಕೆ ಮೂರು ಸಲ ಕುಡಿದರೆ ಪೌರುಷಶಕ್ತಿ ಹೆಚ್ಚುತ್ತದೆ. ಮಾಂಸಖಂಡಗಳು ಬಲಯುತವಾಗಿ ಶಕ್ತಿ ವರ್ಧನೆಗೂ ಅದು ಸಹಕರಿಸುತ್ತದೆ. ವೀರ್ಯಾಣು ಕೊರತೆಯಿಂದ ಸಂತಾನವಾಗದವರಿಗೆ ವೀರ್ಯವಾಹಕ ನಾಳಗಳ ಮೇಲೆ ನೇರ ಪರಿಣಾಮ ಬೀರಿ ಮಕ್ಕಳಾಗುವಂತೆ ಮಾಡುವ ಸಾಮರ್ಥ್ಯ ಈ ಮೂಲಿಕೆಗಿದೆ.
* ಸ್ತ್ರೀಯರ ಬಂಜೆತನವನ್ನೂ ನಿವಾರಿಸಲು ಅಶ್ವಗಂಧಾ ಸಮರ್ಥವಾಗಿದೆ. ರಜಸ್ವಲೆಯಾದ ಬಳಿಕ ಏಳು ದಿನಗಳವರೆಗೆ ಚೂರ್ಣವನ್ನು ಹಾಲಿನಲ್ಲಿ ಕುದಿಸಿ, ಕಲ್ಲುಸಕ್ಕರೆ ಬೆರೆಸಿ ಸೇವಿಸುವುದು ಶೀಘ್ರ ಪರಿಣಾಮಕರ.
* ಪುರುಷರ ಶುಕ್ಲಮೇಹ, ಪ್ರಮೇಹ, ಧಾತುಕ್ಷಯ, ಸ್ವಪ್ನಸ್ಖಲನ, ಮೂತ್ರದೊಂದಿಗೆ ವೀರ್ಯಪತನವಾಗುತ್ತಿದ್ದರೆ ಚೂರ್ಣವನ್ನು ಹಾಲಿನಲ್ಲಿ ಕುದಿಸಿ, ತುಪ್ಪ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು ಎನ್ನುತ್ತಾನೆ ಸುಶ್ರುತ. ಸ್ತ್ರೀಯರ ಬಿಳಿಸೆರಗು ಮತ್ತು ಪ್ರಮೇಹದಿಂದಾಗಿ ಅಶಕ್ತಿ, ಕಣ್ಣು ಕತ್ತಲು, ತಲೆ ತಿರುಗುವುದು ಎಲುಬುಗಳಲ್ಲಿ ನೋವಿದ್ದರೆ ಇದೇ ಚಿಕಿತ್ಸೆಯಿಂದ ಶಾಶ್ವತ ಪರಿಹಾರ ಸಿಗುವುದು. ಮುಟ್ಟು ನಿಲ್ಲುವ ಹಂತದ ಹಲವು ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.
* ಚೂರ್ಣವನ್ನು ಹಾಲಿನಲ್ಲಿ ಕುದಿಸಿ ಸಕ್ಕರೆ ಅಥವಾ ಜೇನು ಬೆರೆಸಿ ಸೇವಿಸುವುದು ನಿದ್ರಾಹೀನತೆ ನಿವಾರಕ. ಖಿನ್ನತೆಯನ್ನು ನಿವಾರಿಸಿ ಮೆದುಳಿನ ಒತ್ತಡವನ್ನು ಶಮನಗೊಳಿಸುವುದು.
* ಚೂರ್ಣದೊಂದಿಗೆ ಬಾದಾಮಿ ಎಣ್ಣೆಯನ್ನು ಸೇರಿಸಿ ನೀರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿದರೆ ಕಲೆಗಳು ನಿವಾರಣೆಯಾಗಿ ಕಾಂತಿ ಹೆಚ್ಚುತ್ತದೆ.
* ಅಶ್ವಗಂಧಾದ ಕ್ಷಾರವನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಶ್ವಾಸರೋಗಗಳು, ಗೂರಲು ಮತ್ತು ಕಫ ನಿವಾರಣೆಯಾಗುವುದು.
* ಶಕ್ತಿವರ್ಧನೆಗಾಗಿ ಮಕ್ಕಳಿಗೆ ದಿನವೂ ಅಶ್ವಗಂಧಾ ಚೂರ್ಣವನ್ನು ತುಪ್ಪದಲ್ಲಿ ಕಲಸಿ ಹಾಲಿನಲ್ಲಿ ಕುದಿಸಿ ಕಲ್ಲುಸಕ್ಕರೆ ಬೆರೆಸಿ ಕೊಡಬಹುದು. ವೃದ್ಧರಿಗೆ, ಕಾಯಿಲೆಯಿಂದ ಎದ್ದವರಿಗೂ ಅದು ಪುಷ್ಟಿದಾಯಕ. ಶಾರೀರಿಕ ಮತ್ತು ಮೆದುಳಿನ ವಿಕಾರಗಳಿಂದ ಬರುವ ತಲೆನೋವು, ಬುದ್ಧಿಮಾಂದ್ಯ, ಸ್ಮರಣಶಕ್ತಿಯ ಕೊರತೆ, ಮಾಂಸಖಂಡಗಳ ದೌರ್ಬಲ್ಯ, ಕೈಕಾಲುಗಳಲ್ಲಿ ಕಂಪನ, ಟೊಂಕನೋವು, ಎಲುಬು ಮತ್ತು ನರಗಳ ದೌರ್ಬಲ್ಯ, ಅರ್ಧಾಂಗವಾಯು ಇದೆಲ್ಲವೂ ಈ ಚಿಕಿತ್ಸೆಯಿಂದ ಗುಣವಾಗುತ್ತವೆ.
* ಅಶ್ವಗಂಧಾ ಲೇಹ್ಯವು ದೇಹದಲ್ಲಿ ಪಿಷ್ಟ ಮತ್ತು ಮೇದಸ್ಸನ್ನು ಹೆಚ್ಚಿಸುತ್ತದೆ. ಆದರೆ ಕೊಲೆಸ್ಟ್ರಾಲ್ ನಿಯಂತ್ರಿಸಿ ರಕ್ತದಲ್ಲಿ ಹೆಮೊಗ್ಲೋಬಿನ್ ಪ್ರಮಾಣವನ್ನು ವೃದ್ಧಿಸುತ್ತದೆ.
* ಮಧುಮೇಹ, ಅಪಸ್ಮಾರ ಮತ್ತು ಪಾರ್ಕಿನ್‌ಸನ್ ಸಮಸ್ಯೆಗಳಿಗೆ ಅಶ್ವಗಂಧಾ ಎಲೆಗಳ ಚೂರ್ಣ ಸೇವನೆ ಉತ್ತಮ ಚಿಕಿತ್ಸೆಯಾಗಿದೆ. ಕಣ್ಣಿನ ಕಾಂತಿಯನ್ನೂ ಅದು ವರ್ಧಿಸುತ್ತದೆ.
* ಅಶ್ವಗಂಧದ ಅರಿಷ್ಟಸೇವನೆಯಿಂದ ದೇಹಕಾಂತಿ ಹೆಚ್ಚಿ ಗಲ್ಲಗಳ ಸುಕ್ಕು ನಿವಾರಣೆಯಾಗುತ್ತದೆ. ದೇಹಕಾಂತಿ ಹೆಚ್ಚಾಗುತ್ತದೆ.
* ಮೂಲವ್ಯಾಧಿ ನಿವಾರಣೆಗೆ ಅಶ್ವಗಂಧಾ ಚೂರ್ಣವನ್ನು ಕೆಲವು ದಿನಗಳ ಕಾಲ ನೀರಿನಲ್ಲಿ ಕದಡಿ ಸೇವಿಸಬೇಕು.
* ಎದೆಹಾಲು ಕಮ್ಮಿಯಿರುವ ತಾಯಂದಿರು ಅಶ್ವಗಂಧಾ ಚೂರ್ಣವನ್ನು ಹಾಲಿನಲ್ಲಿ ಕಲಸಿ ತುಪ್ಪ ಸೇರಿಸಿ ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಹಾಲು ಅಧಿಕವಾಗುತ್ತದೆ.
* ರೋಗಾಣು ನಿವಾರಣೆಯ ಅಪಾರ ಸೂಕ್ಷ್ಮಾಣುಗಳು ಅಶ್ವಗಂಧಾದಲ್ಲಿವೆ. ಎಲೆಗಳ ರಸವನ್ನು ಹಚ್ಚಿದರೆ ಚರ್ಮರೋಗಗಳು ಗುಣವಾಗುತ್ತವೆ. ಗಾಯಗಳಿಗೆ ಎಲೆಯ ಪೋಲ್ಟೀಸ್ ಹಾಕಬಹುದು. ಪ್ಲೇಗಿನ ಗಂಟುಗಳು ಮತ್ತು ಬಾವು ನಿವಾರಣೆಗೂ ಅದು ಸಮರ್ಥವಾಗಿದೆ.
* ಇದು ನವಜೀವನ ಕಲ್ಪವೂ ಹೌದು. ಲೈಂಗಿಕ ಅಸಮರ್ಥತೆಯನ್ನು ನಿತ್ಯಸೇವನೆಯಿಂದ ತೊಡೆಯಬಹುದು.
* ಥೈರಾಯ್ಡ್ ಸಮಸ್ಯೆಯಿಂದ ಬಳಲುವವರಿಗೆ ಅಶ್ವಗಂಧಾ ಸೇವನೆ ಹಿತಕರವಲ್ಲ. ಗರ್ಭಿಣಿಯರು ಅದರ ತೊಗಟೆಯನ್ನು ಬಳಸಬಾರದು. ತೊಗಟೆಗೆ ಗರ್ಭಪಾತದ ಗುಣವಿದೆ. ಕೆಲವರಿಗೆ ಅದರ ಸೇವನೆಯಿಂದ ವಾಕರಿಕೆ, ಅತಿಸಾರ ಇತ್ಯಾದಿ ಸಮಸ್ಯೆಗಳು ಬರುವುದುಂಟು. ಸಂಧಿವಾತ, ದೀರ್ಘಕಾಲದ ಯಕೃತ್ ಸಮಸ್ಯೆ, ಕ್ಷಯ, ಪಾರ್ಶ್ವವಾಯು, ಕುಷ್ಠ, ಕ್ಯಾನ್ಸರ್ ನಿರೋಧಕ ಗುಣಗಳಿರುವ ಈ ಅಮೂಲ್ಯ ಗಿಡದ ಹಣ್ಣುಗಳ ಸೇವನೆ ಮೂತ್ರವರ್ಧಕವಾಗಿದೆ.
No comments