ಕಲಾಮಂದಿರದಲ್ಲಿ ಗೋಮಾಂಸ ಭಕ್ಷಿಸಿ ಸಂವಾದ ಉದ್ಘಾಟಿಸಿದ ಭಗವಾನ್
ಮೈಸೂರು: ವಿವಾದಾತ್ಮಕ ಬುದ್ದಿ ಜೀವಿ ಕೆ.ಎಸ್. ಭಗವಾನ್ ಕಲಾಮಂದಿರದಲ್ಲಿ ಗೋ ಮಾಂಸ ಭಕ್ಷಿಸಿ ವಿವಾದ ಸ್ರಷ್ಟಿಸಿದ್ದಾರೆ . ‘‘ಹಸು ಮತ್ತು ಗೂಳಿ ಪವಿತ್ರವಾದದ್ದು, ಅದರ ಮಾಂಸ ಭಕ್ಷಿಸಿದರೆ ದೇಹಕ್ಕೆ ಒಳ್ಳೆಯದೆಂದು ಹಿಂದೆಯೇ ವೈದಿಕರು ಹೇಳಿದ್ದಾರೆ,’’ ಎಂದು ಮನೆಯಂಗಳದಲ್ಲಿ ನಡೆದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ’ ಸಂವಾದ ಕಾರ‌್ಯಕ್ರಮದಲ್ಲಿ ಮಾತನಾಡಿದ ಚಿಂತಕ ಕೆ.ಎಸ್. ಭಗವಾನ್,ಪ್ರತಿಪಾದಿಸಿದರು.
‘‘ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ 7ನೇ ಸಂಪುಟದ 324, 327, 328ನೇ ಪುಟಗಳಲ್ಲಿ ಗೋ ಮಾಂಸದ ಬಗ್ಗೆ ಬರೆದಿದ್ದಾರೆ. ಅಸಸ್ತಂಭ ಸೂತ್ರದಲ್ಲಿ ವೈದಿಕರು ಗೋವು ಪವಿತ್ರವಾದ ಪ್ರಾಣಿಯಾಗಿದ್ದು, ಅದರ ಮಾಂಸವನ್ನು ಭಕ್ಷಿಸಿದರೆ ದೇಹಕ್ಕೆ ಉತ್ತಮವಾಗಿದ್ದುಘಿ, ಶಕ್ತಿ, ಉತ್ಸಾಹ ಸಿಗುತ್ತದೆ ಎಂದಿದ್ದಾರೆ. ಶತಪಥ ಬ್ರಾಹ್ಮಣದಲ್ಲೂ ಇದೇ ವಿಚಾರಗಳು ಉಲ್ಲೇಖವಾಗಿವೆ. ಗೋಮಾಂಸವನ್ನು ಹೆಚ್ಚಾಗಿ ತಿನ್ನುತ್ತಿದ್ದ ಬ್ರಾಹ್ಮಣರು, ಬೌದ್ಧ ಧರ್ಮ ಉದಯವಾದಾಗ ಅವರ ಮುಂದೆ ತಾವು ಕೀಳಾಗುತ್ತೇವೆ ಎಂಬ ಕಾರಣಕ್ಕೆ ಗೋ ಮಾಂಸವನ್ನು ತಿನ್ನುವುದನ್ನು ನಿಲ್ಲಿಸಿದರು,’’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರೆಲ್ಲರಿಗೂ ಬೆಳಗಿನ ಉಪಾಹಾರವಾಗಿ ಕೇಸರಿಬಾತ್, ಉಪ್ಪಿಟ್ಟು, ಪೊಂಗಲ್, ಗೋಮಾಂಸ, ಚಿಕನ್ ಕಬಾಬ್ ಹಂಚಲಾಯಿತು. ಮಧ್ಯಾಹ್ನದ ಊಟವಾಗಿ ಬ್‌ೀ ಬಿರಿಯಾನಿ, ಕೇಸರಿ ಬಾತ್, ಉಪ್ಪಿಟ್ಟು ವಿತರಿಸಲಾಯಿತು.
ತೀವ್ರ ವಿರೋಧ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಎವಿಎಸ್‌ಎಸ್ ಸಂಸ್ಥೆಯ ಸಹಯೋಗದೊಂದಿಗೆ ಚಾರ್ವಾಕ ಸೋಷಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಕಲಾಮಂದಿರ ‘ಮನೆಯಂಗಳ’ ಸಭಾಂಗಣದಲ್ಲಿ ಭಾನುವಾರ ನಡೆದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ’ ಸಂವಾದ ಕಾರ‌್ಯಕ್ರಮವನ್ನು ಗೋ ಮಾಂಸ ಭಕ್ಷಣೆ ಮಾಡುವ ಉದ್ಘಾಟಿಸಲಾಯಿತು. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಕಲಾಮಂದಿರದಲ್ಲಿ ಗೋ ಮತ್ತು ಕೋಳಿ ಮಾಂಸ ಸೇವನೆಗೆ ಅವಕಾಶಕೊಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ: ನಗರದ ವಿಶ್ವಮಾನವ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಇತಿಹಾಸಕ್ಕೆ ಸಂಬಂಧಪಟ್ಟಂತೆ ಮೀಸಲಾಗಿರುವ ಕನ್ನಡಿಗರ ದೇಗುಲ ಎನಿಸಿಕೊಂಡಿರುವ ಕಲಾಮಂದಿರವನ್ನು ಮಾಂಸಾಹಾರಿ ಹೋಟೆಲನ್ನಾಗಿ ಪರಿವರ್ತಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ತಿಂಡಿ- ತಿನಿಸುಗಳಿಗೆ ವ್ಯಾಪಕ ನಿರ್ಬಂಧ ಹೇರುವ ಇಲಾಖೆಯ ಅಧಿಕಾರಿಗಳು, ಇಂದು ಮಾಂಸ ಭಕ್ಷಣೆಗೆ ಅವಕಾಶ ನೀಡಿರುವುದು ಸರಿಯಿಲ್ಲ. ಕೀಳುಮಟ್ಟದ ಪ್ರಚಾರಕ್ಕಾಗಿ ಇಂತಹ ಕೃತ್ಯಕ್ಕಿಳಿದಿರುವ ಕೆಲವು ವಿಚಾರವಾದಿಗಳು ಇಂತಹ ಘಟನೆಗಳಿಗೆ ಪ್ರಚೋದನೆ ಮಾಡುವ ಮೂಲಕ ಕಲಾಮಂದಿರದ ಪಾವಿತ್ರ್ಯತೆ ಹಾಳು ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
-toi
No comments