Breaking News

ಸತತ ಕೋಮು ಘರ್ಷಣೆಯ ನಂತರ ಸಹಜ ಸ್ಥಿತಿಗೆ ಮರಳುತಿದೆ ಕಲ್ಲಡ್ಕ


ಬಂಟ್ವಾಳ : ಕಲ್ಲಡ್ಕದಲ್ಲಿ ಮಂಗಳವಾರ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಬುಧವಾರ ರಾತ್ರಿವರೆಗೆ ಒಟ್ಟು ಹತ್ತು ವಿವಿಧ ಪ್ರಕರಣಗಳು ದಾಖಲಾಗಿದ್ದು, ಉಭಯ ಕೋಮಿಗೆ ಸೇರಿದ ತಲಾ 9 ಮಂದಿಯಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮತ್ತೆ ತನಿಖೆ ಮುಂದುವರಿಸಿದ್ದಾರೆ.

ಘಟನೆಯಲ್ಲಿ ರತ್ನಾಕರ ಶೆಟ್ಟಿ, ಖಲೀಲ್ ಸಹಿತ ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಾರುತಿ ಓಮ್ನಿ, ನಾಲ್ಕು ಬೈಕ್, ಐದು ಅಂಗಡಿ, ಒಂದು ಮನೆಗೆ ಹಾನಿ ಉಂಟಾಗಿದೆ.

ನಿರಂತರ ಚೂರಿತ ಇರಿತ, ಕಲ್ಲು-ಬಾಟ್ಲಿ ಎಸೆತ ಹಾಗೂ ಕೋಮು ಸಂಘರ್ಷದಿಂದ ಸಂಪೂರ್ಣ ನಲುಗಿ ಹೋಗಿರುವ ಕಲ್ಲಡ್ಕ ಇದೀಗ ಸಹಜ ಸ್ಥಿತಿಗೆ ಮರಳುತಿದೆ. ಪರಿಸ್ಥಿತಿ ಸಂಪೂರ್ಣ ಪೊಲೀಸರ ನಿಯಂತ್ರಣದಲ್ಲಿದೆಯಾದರೂ ಜನರ ಮನಸ್ಸಿನಲ್ಲಿ ಇನ್ನೂ ಆತಂಕ ಮಾಯವಾಗಿಲ್ಲ.

ಜೂ 21ರವರೆಗೆ ಸೆಕ್ಷನ್ ವಿಸ್ತರಣೆ

ಜೂ 16 ರವರೆಗೆ ಬಂಟ್ವಾಳ ತಾಲೂಕಿಗೆ ಸೆಕ್ಷನ್ 144 ರಂತೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಮಂಗಳವಾರದ ಘರ್ಷಣೆ ಬಳಿಕ ಜಿಲ್ಲಾ ಎಸ್ಪಿ ವ್ಯಾಪ್ತಿಯ ಎಲ್ಲ ನಾಲ್ಕು ತಾಲೂಕುಗಳಾಗಿರುವ ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಿಗೆ ಅನ್ವಯವಾಗುವಂತೆ ಜೂ 14 ರ ಮಧ್ಯರಾತ್ರಿವರಗೆ ವಿಸ್ತರಿಸಲಾಗಿತ್ತು. ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ನೆಲೆಸಿರುವುದರಿಂದ ಮತ್ತೆ ನಿಷೇಧಾಜ್ಞೆಯನ್ನು ಜೂನ್ 21ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

No comments