ಪೊಲೀಸ್ ಪೇದೆ ಶವ ಸಾಗಿಸಲು ಸಿಗಲಿಲ್ಲ ಆಂಬುಲೆನ್ಸ್
ಉಡುಪಿ : ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪೇದೆಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೃತದೇಹವನ್ನು ಪೊಲೀಸ್ ಇಲಾಖೆಯು ಆತನ ಊರಿಗೆ ಸರಕಾರಿ ಅಂಬುಲೆನ್ಸಿನಲ್ಲಿ ಸಾಗಿಸದೇ ಪೊಲೀಸ್ ಬಸ್ಸಿನಲ್ಲಿ ತುರುಕಿಸಿ, ಅದರಲ್ಲೇ ಆತನ ಕುಟುಂಬಿಕರನ್ನು ಕಳುಹಿಸುವ ಮೂಲಕ ಪೊಲೀಸರ ಆತ್ಮಸ್ಥೈರ್ಯನ್ನು ಕುಗ್ಗಿಸುವ ಘಟನೆ ಶನಿವಾರ ಮಣಿಪಾಲದಲ್ಲಿ ನಡೆದಿದೆ.
ಘಟನೆಯ ವಿವರ:
ಬಾಗಲಕೋಟೆ ನಿವಾಸಿ ಮಹಾಂತ ಬಸಪ್ಪ(೩೭) ಎಂಬ ಪೊಲೀಸ್ ಪೇದೆ ಕಿಡ್ನಿ ವೈಫಲ್ಯಕ್ಕೀಡಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗಿದ್ದು, ಅದು ಫಲಕಾರಿಯಾಗದೆ ನಿನ್ನೆ ಸಂಜೆಯ ವೇಳೆ ಮಹಾಂತ ಬಸಪ್ಪ ನಿಧನರಾಗಿದ್ದಾರೆ. ವಾರಿಸುದಾರರು ಶವವನ್ನು ರಾತ್ರಿ ಅವರ ಊರಾದ ಬಾಗಲಕೋಟೆಗೆ ಕೊಂಡೊಯ್ಯಲು ನಿರ್ಧರಿಸಿದರು. ಆದರೆ ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆಯಾಗಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಶವವನ್ನು ಮಣಿಪಾಲದ ಶವಾಗಾರದಲ್ಲಿ ಇಡಲಾಯಿತು.
ಇಂದು ಬೆಳಗ್ಗೆ ಪೊಲೀಸ್ ಪೇದೆಯ ಶವ ಸಾಗಾಟಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಮನೆಮಂದಿ ವಿನಂತಿ ಮಾಡಿದರೂ ಅದರ ವ್ಯವಸ್ಥೆಯಾಗಲೇ ಇಲ್ಲ ಎನ್ನಲಾಗಿದೆ. ಕೊನೆಗೆ ಪೊಲೀಸ್ ಇಲಾಖೆಯ ಬಸ್‌ನಲ್ಲಿ ಹೆಣವನ್ನು ತುರುಕಿಸಿ ಮಣಿಪಾಲದಿಂದ ಬಾಗಲಕೋಟೆಗೆ ಸಾಗಿಸಲಾಯಿತು. ಒಬ್ಬ ಪೊಲೀಸ್ ಪೇದೆ ಸತ್ತಾಗ ಸರಕಾರದ ಇಲಾಖೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಗದೇ ಇರುವುದು ಸರಕಾರದ ಆಡಳಿತ ವೈಫಲಕ್ಕೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜದ ರಕ್ಷಣೆ ಮಾಡುವ ಪೊಲೀಸರಿಗೇ ಈ ಪರಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಅನ್ನೋ ಜನರ ಪ್ರಶ್ನೆಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉತ್ತರಿಸಬೇಕಿದೆ.
No comments