ಹಿಂದೂ ಸಂಘಟನೆ ನಾಯಕರ ಜಾಮೀನು ಅರ್ಜಿ ಜುಲೈ 26ರಂದು ತೀರ್ಪು
ಮಂಗಳೂರು : ಬಿ ಸಿ ರೋಡಿನಲ್ಲಿ ಕೊಲೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಐದು ಮಂದಿ ಸಂಘ ಪರಿವಾರ ನಾಯಕರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿ ಸಂಬಂಧದ ತೀರ್ಪನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜುಲೈ 26, ಬುಧವಾರದಂದು ಪ್ರಕಟಿಸಲಿದೆ.
ಈ ಐದು ಮಂದಿಯ ನಿರೀಕ್ಷಣಾ ಜಾಮೀನು ಅರ್ಜಿಸಹಿತ ಈಗಾಗಲೇ ಬಂಟ್ವಾಳ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಂಧನದಲ್ಲಿರುವ ಇತರ 17 ಮಂದಿಯ ಜಾಮೀನು ಅರ್ಜಿಗಳ ವಿಚಾರಣೆಯನ್ನೂ ನ್ಯಾಯಾಲಯ ಶನಿವಾರ ಪೂರ್ತಿಗೊಳಿಸಿದ್ದು, ಅವುಗಳಿಗೆ ಸಂಬಂಧಿಸಿದ ತೀರ್ಪು ಕೂಡ ಜುಲೈ 26ರಂದೇ ಹೊರಬರಲಿದೆ. ಈತನ್ಮದ್ಯೆ ಕೆಲವು ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಜುಲೈ 25ರಂದು ದಿನ ನಿಗದಿ ಪಡಿಸಲಾಗಿದೆ.
ಶವಯಾತ್ರೆಯ ನೇತೃತ್ವ ವಹಿಸಿದ್ದ ಸಂಘ ಪರಿವಾರದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ವೆಲ್, ಪ್ರದೀಪ್ ಪಂಪ್ವೆಲ್, ಹರೀಶ್ ಪೂಂಜಾ ಹಾಗೂ ಮುರಳೀಕೃಷ್ಣ ಹಸಂತಡ್ಕ ನಿರೀಕ್ಷಣಾ ಜಾಮೀನು ಸಲ್ಲಿಸಿದವರಾಗಿದ್ದು ಪ್ರಕರಣ ದಾಖಲಾಗಿದ್ದಂದಿನಿಂದ ಪೊಲೀಸರ ಕೈಗೆ ಸಿಕ್ಕಿಲ್ಲ.
ಶನಿವಾರದ ವಿಚಾರಣೆ ವೇಳೆ ಆರೋಪಿಗಳ ನಿರೀಕ್ಷಣಾ ಜಾಮೀನಿಗೆ ತೀವ್ರ ಆಕ್ಷೇಪ ಸಲ್ಲಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಹರೀಶ್ಚಂದ್ರ ಉದ್ಯಾವರ್, ಆರೋಪಿಗಳು ಸೆಕ್ಷನ್ 144 ಅನ್ವಯ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದರಲ್ಲದೆ ಹಿಂಸೆಯ ನಂತರ ದಾಖಲಾಗಿರುವ ಐದು ಇತರ ಪ್ರಕರಣಗಳ ಸಂಬಂಧದ ವಿಚಾರಣೆಗೂ ಈ ಐದು ಮಂದಿ ಆರೋಪಿಗಳೂ ಬೇಕಾಗಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದೆಂದು ಕೋರಿದರು.
ಆರೋಪಿಗಳ ಪರ ವಕೀಲ ಕೆ ಶಂಭು ಶರ್ಮ ತಮ್ಮ ವಾದ ಮಂಡನೆಯ ಸಂದರ್ಭ ಪ್ರಕರಣದಲ್ಲಿನ ಹಲವಾರು ನ್ಯೂನತೆಗಳನ್ನು ಬೊಟ್ಟು ಮಾಡಿದರಲ್ಲದೆ ಇಂತಹುದೇ ಪ್ರಕರಣಗಳಲ್ಲಿ ಈ ಹಿಂದೆ ಬೇರೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ತಮ್ಮ ಕಕ್ಷಿಗಾರರಿಗೆ ಜಾಮೀನು ಮಂಜೂರುಗೊಳಿಸುವಂತೆ ವಿನಂತಿಸಿದ್ದಾರೆ.
No comments