Breaking News

ಗೋವಿನಿಂದ ಏಡ್ಸ್‌ ತಡೆಗಟ್ಟುವ ಲಸಿಕೆ ಅಭಿವೃದ್ಧಿ





ವಾಷಿಂಗ್ಟನ್‌: ಗೋವಿನಲ್ಲಿರುವ ರೋಗ ನಿರೋಧಕ ವ್ಯವಸ್ಥೆ ಕೇವಲ ಒಂದೇ ವಾರದಲ್ಲಿ ಎಚ್‌ಐವಿ ವೈರಸ್‌ಗಳನ್ನು ತಡೆಗಟ್ಟುವ ಪ್ರತಿಜೀವಕಗಳು (ಆ್ಯಂಟಿಬಾಡಿ) ಬಿಡುಗಡೆಯಾಗಬಲ್ಲವು ಎಂದು ಅಮೆರಿಕ ಮೂಲದ ಸಂಶೋಧಕರ ತಂಡ ಅಭಿಪ್ರಾಯ ಪಟ್ಟಿದೆ. ಈ ಪ್ರತಿಜೀವಕಗಳನ್ನು ಬಿಡುಗಡೆಗೊಳಿಸಲು ಮಾನವನ ದೇಹಕ್ಕೆ ಸಾಕಷ್ಟು ವರ್ಷಗಳೇ ಬೇಕಾಗುತ್ತದೆ. ಭವಿಷ್ಯದಲ್ಲಿ ಈ ಮೂಲಕ ಏಡ್ಸ್‌ ತಡೆಗಟ್ಟುವ ಲಸಿಕೆ ಅಭಿವೃದ್ಧಿ ಪಡಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಈ ಅಧ್ಯಯನ 'ನೇಚರ್‌' ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದುಗೋವುಗಳಲ್ಲಿ ನ ಸಂಕೀರ್ಣ ಬಾಕ್ಟೀರಿಯಾ ಪೂರಿತ ಜೀರ್ಣವ್ಯವಸ್ಥೆ ಈ ಪ್ರತಿರೋಧಕಗಳ ಬಿಡುಗಡೆಗೆ ಪೂರಕ ಎನ್ನಲಾಗಿದೆ. ''ಎಚ್‌ಐವಿ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯಯುತ ವ್ಯಕ್ತಿಗೆ ತಟಸ್ಥ ಜೀವಪ್ರತಿರೋಧಕಗಳನ್ನು ನೀಡುವ ಪ್ರಯತ್ನಗಳು ಮನುಷ್ಯರು ಹಾಗೂ ಪ್ರಾಣಿಗಳೆರಡರಲ್ಲೂ ವಿಫಲಗೊಂಡಿವೆ,'' ಎಂದು ಅಂತಾರಾಷ್ಟ್ರೀಯ ಏಡ್ಸ್‌ ಲಸಿಕೆ ಕಾರ್ಯಕ್ರಮದ (ಐಎವಿಐ)ನ ಜೀವಪ್ರತಿರೋಧಕ ಪತ್ತೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಡೇವಿನ್‌ ಸೊಕ್‌ ಹೇಳಿದ್ದಾರೆ.

''ಆದರೆ ಈ ಹೊಸ ಅಧ್ಯಯನ ಪ್ರಾಣಿಗಳಲ್ಲಿ ಈ ಜೀವಪ್ರತಿರೋಧಕಗಳ ಉತ್ಪಾದನೆ ಮಾತ್ರವಲ್ಲ, ಸರಳ ಪ್ರತಿರಕ್ಷಣೆ ತಂತ್ರಗಳನ್ನು ಬಳಸಿಕೊಂಡು ಶಿಘ್ರವಾಗಿ, ಹೇರಳವಾಗಿ ಉತ್ಪಾದಿಸಬಹುದು ಎಂಬುದು ತಿಳಿದುಬಂದಿದೆ,'' ಎಂದು ಸೊಕ್‌ ಹೇಳಿದ್ದಾರೆ. ದೀರ್ಘಕಾಲದ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ಕೆಲವರ ದೇಹದಲ್ಲಿ ಭಾರಿ ಸಂಖ್ಯೆಯಲ್ಲಿ ಈ ತಟಸ್ಥ ಜೀವಪ್ರತಿರೋಧಕಗಳು ಉತ್ಪಾದನೆಯಾಗುತ್ತದೆ. ಆದರೆ ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲದೆ ಕೇವಲ 5 ರಿಂದ 15 ಪ್ರತಿಶತ ಜನರು ಮಾತ್ರ ಇವುಗಳನ್ನು ಉತ್ಪಾದಿಸಬಲ್ಲರು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆದರೆ ಮಾನವನ ದೇಹ ಎಚ್‌ಐವಿ ವಿರುದ್ಧ ಪ್ರತಿಜೀವಕಗಳನ್ನು ಉತ್ಪಾದಿಸದಂತೆ ತನ್ನ ಪ್ರೋಟಿನ್‌ ಘಟಕವನ್ನು ಮರೆಮಾಚುವ ವೈರಸ್‌ ಮಾನವನ ರೋಗ ನಿರೋಧಕ ವ್ಯವಸ್ಥೆಯನ್ನು ಕಂಗೆಡಿಸುತ್ತದೆ. ಆದರೆ ಈಗ ವಿಜ್ಞಾನಿಗಳು ಎಚ್‌ಐವಿಯ ಪ್ರೋಟಿನನ್ನೆ ಹೋಲುವ 'ಬಿಜಿ505 ಎಸ್‌ಒಎಸ್‌ಐಪಿ' ಇಮ್ಯೂನೊಜಿನ್‌ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ವಿಜ್ಞಾನಿಗಳು 'ಬಿಜಿ505 ಎಸ್‌ಒಎಸ್‌ಐಪಿ'' ಎಂಬ ಇಮ್ಯುನೊಜಿನ್‌ ಅನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು 4 ಗೋವುಗಳ ದೇಹಕ್ಕೆ ಸೇರಿಸಿದಾಗ ಕೇವಲ 35-52 ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಚ್‌ಐವಿ ತಡೆಗಟ್ಟಬಲ್ಲ ಪ್ರತಿಜೀವಕಗಳು ಉತ್ಪಾದನೆಯಾಗಿವೆ. ''ಹಸುಗಳು ಎಚ್‌ಐವಿ ಪೀಡಿತವಾಗಲು ಸಾಧ್ಯವಿಲ್ಲ. ಆದರೆ ಈ ಸಂಶೋಧನೆಯಿಂದ ಎಚ್‌ಐವಿ ವಿರುದ್ಧ ಲಸಿಕೆ ಅಭಿವೃದ್ಧಿಗೆ ಸ್ಫೂರ್ತಿ ದೊರಕಿದೆ,'' ಎಂದು ಸಂಶೋಧಕರು ತಿಳಿಸಿದ್ದಾರೆ.

No comments