ಕರಾವಳಿ ಕಡಲ ಓಡಲಿನಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳು ಪತ್ತೆ
ಕೋಲ್ಕೊತಾ: ಮಂಗಳೂರು ಕರಾವಳಿ ಸೇರಿದಂತೆ ದೇಶದ ಕಡಲ ತಳದಲ್ಲಿ ಅಪಾರ ಪ್ರಮಾಣದ ಲೋಹ ಮತ್ತು ಖನಿಜ ನಿಕ್ಷೇಪಗಳಿರುವುದನ್ನು ಭಾರತಿಯ ಭೂ ವೈಜ್ಞಾನಿಕ ಸರ್ವೆಕ್ಷ ಣಾ ಇಲಾಖೆಯ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ಕಳೆದ ಮೂರು ವರ್ಷಗಳಿಂದ ಇದಕ್ಕೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುತ್ತಿದ್ದು , ಭಾರಿ ಪ್ರಮಾಣದ ಖನಿಜ ಮತ್ತು ಲೋಹದ ಸಂಪತ್ತಿನ ಇರುವಿಕೆಯು ಮುಂದಿನ ದಿನಗಳಲ್ಲಿ ಉದ್ಯಮ ವಿಸ್ತರಣೆಗೆ ದಾರಿ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ಅಧ್ಯಯನ ತಂಡ ಹೇಳಿದೆ.
ಮಂಗಳೂರು, ಕಾರವಾರ, ಚೆನ್ನೈ, ಅಂಡಮಾನ್-ನಿಕೋಬಾರ್ ದ್ವೀಪ ಹಾಗೂ ಲಕ್ಷದ್ವೀಪ ಕರಾವಳಿ ತೀರದಲ್ಲಿ ಫಾಸ್ಪೇಟ್, ಹೈಡ್ರೋಕಾರ್ಬನ್, ಮ್ಯಾಂಗನೀಸ್, ಮೆಟಾಲಿಫರಸ್ ಖನಿಜ/ಲೋಹದ ಸಂಪತ್ತು ವಿವಿಧ ರೂಪದಲ್ಲಿದೆ.
ಪತ್ತೆ ಹೆಚ್ಚಿದ್ದು ಹೇಗೆ?
ಅತ್ಯಾಧುನಿಕ 'ಸಮುದ್ರ ರತ್ನಾಕರ್', 'ಸಮುದ್ರ ಕೌಸ್ತುಭ್' ಮತ್ತು 'ಸಮುದ್ರ ಸೌದಿಕಾಮ' ನೌಕೆಗಳು ಸಾಗರ ತಳದಲ್ಲಿ 1,81,025 ಚದರ ಕಿಲೋಮೀಟರ್ ಪ್ರದೇಶದಲ್ಲಿ ಕಲ್ಲು ಬಂಡೆಗಳ ರೂಪದಲ್ಲಿ/ ಸುಣ್ಣದ ಮಣ್ಣಿನ ಕೆಸರಿನ ರೂಪದಲ್ಲಿ ಖನಿಜ ಸಂಪತ್ತಿನ ನಿಕ್ಷೇಪಗಳ ಚಿತ್ರವನ್ನು ಸೆರೆ ಹಿಡಿದು ರವಾನಿಸಿವೆ.
10,000 ದಶಲಕ್ಷ ಟನ್: ಭಾರತದ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಯಲ್ಲಿ 10,000 ದಶಲಕ್ಷ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಪ್ರದೇಶದಲ್ಲಿ ಲೈಮ್‌ಮಡ್ ಇರುವಿಕೆಯನ್ನು ವಿಜ್ಞಾನಿಗಳ ತಂಡ ದೃಢಪಡಿಸಿದೆ.
ಎಲ್ಲೆಲ್ಲಿ ಯಾವ ಖನಿಜ?:
ಕಾರವಾರ, ಮಂಗಳೂರು, ಚೆನ್ನೈ ಕರಾವಳಿ ತೀರದಲ್ಲಿ ಚರಟ ರೂಪದಲ್ಲಿ ಫಾಸ್ಪೇಟ್, ಮನ್ನಾರ್ ಜಲಾನಯನ ಪ್ರದೇಶದಲ್ಲಿ ಅನಿಲ ರೂಪದಲ್ಲಿ ಹೈಡ್ರೋಕಾರ್ಬನ್, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ತೀರದ ಸಾಗರದಾಳದಲ್ಲಿ ಸಣ್ಣ ಹರಳಿನ ರೂಪದಲ್ಲಿ ಮ್ಯಾಂಗನೀಸ್ ನಿಕ್ಷೇಪವನ್ನು ಪತ್ತೆ ಹಚ್ಚಲಾಗಿದೆ.
No comments