Breaking News

ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಸರಕಾರ ಯಶಸ್ವಿ : ಆಂಜನೇಯಬೆಂಗಳೂರು :  ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಅತ್ಯಂತ ಯಶಸ್ವಿಯಾಗಿದ್ದು, ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ ಎಂದು ಸಮಾವೇಶದ ರುವಾರಿಗಳಲ್ಲಿ ಒಬ್ಬರಾದ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಇಂದಿಲ್ಲಿ ಸಂತಸ ವ್ಯಕ್ತಪಡಿಸಿದರು.

ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಮಾವೇಶವನ್ನು ಆಯೋಜಿಸಲು ಅಂಬೇಡ್ಕರ್ ಅವರ ಅನುಯಾಯಿಗಳೂ ಆದ ಸಿದ್ಧರಾಮಯ್ಯ ಅವರ ಬದ್ಧತೆ ಮತ್ತು ಇಚ್ಛಾಶಕ್ತಿ ಕಾರಣವಾಗಿದೆ ಎಂದು ಹೇಳಿದರು.

ಸಮಾವೇಶ ಯಶಸ್ವಿಯಾಗಿರುವುದು ತಮಗೆ ಖುಷಿ ತಂದಿದೆ. ಇದೊಂದು ಐತಿಹಾಸಿಕ ಸಮಾವೇಶ ಆಗಿದ್ದು, ವಿಶ್ವ ದಾಖಲೆಯಾಗಿದೆ. ನಾಡಿನ ಪ್ರತಿಯೊಬ್ಬರೂ ಹೆಮ್ಮೆಪಡುವಂತಹ ವಿಷಯವಾಗಿದೆ ಎಂದರು.

ಸಮಾವೇಶದ ರುವಾರಿ ಎಂಬುದಕ್ಕಿಂತ ನಾನೊಬ್ಬ ಸೇವಕ ಎಂದ ಆಂಜನೇಯ, ಈ ಸಮಾವೇಶ ಯಶಸ್ವಿಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಸಹಕಾರ ಕಾರಣವಾಗಿದೆ ಎಂದರು.

ದೇಶ ವಿದೇಶಗಳ ಚಿಂತಕರು, ಹೋರಾಟಗಾರರ ಸಮಾಮಗಮಕ್ಕೆ ಇದೊಂದು ವೇದಿಕೆಯಾಗಿತ್ತು. ಯಾವುದೇ ರಾಜ್ಯದಲ್ಲೂ ಇಂತಹ ಸಮಾವೇಶವನ್ನು ಮಾಡಿರುವ ಉದಾಹರಣೆಗಳಿಲ್ಲ. ಅವಕಾಶ ವಂಚಿತ ಸಮುದಾಯಗಳಿಗೆ ದ್ವನಿಯಾಗಿದ್ದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮತ್ತೊಮ್ಮೆ ಪುನರ್ ಮನನ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

No comments