Breaking News

ಗೋ ಹತ್ಯೆ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂ



ನವದೆಹಲಿ :  ಗೋವು ಹತ್ಯೆ ನಿಷೇಧ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಹೊಸ ಅಧಿಸೂಚನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಇಂದು ಅಧಿಸೂಚನೆಗೆ ತಡೆ ನೀಡಿದೆ. ಇದರಿಂದ ದೇಶಾದ್ಯಂತ ಗೋ ಹತ್ಯೆ ನಿಷೇಧಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.

ಅಧಿಸೂಚನೆಯನ್ನು ಪರಿಷ್ಕರಿಸಿ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಪೀಠ, ಜಾನುವಾರು ವಿಷಯದಲ್ಲಿ ಯಾವುದೇ ಅಸ್ಪಷ್ಟತೆ ಇರಬಾರದು ಎಂದು ಹೇಳಿದೆ.

ಮೇ ೩೦ರಂದು ಮದ್ರಾಸ್ ಹೈಕೋರ್ಟ್ ಕೇಂದ್ರದ ಹೊಸ ಅಧಿಸೂಚನೆಗೆ ತಡೆ ನೀಡಿತ್ತು. ಇಂದು ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದು, ದೇಶಾದ್ಯಂತ ಅಧಿಸೂಚನೆಗೆ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ, ಮದ್ರಾಸ್ ಹೈಕೋರ್ಟ್‌ನ ತಡೆಯನ್ನು ದೇಶಾದ್ಯಂತ ವಿಸ್ತರಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹನ್ ಅವರು ಈ ನಿಯಮವನ್ನು ಪರಿಶೀಲಿಸಿ, ನಿಯಮ ಬದಲಾಯಿಸುದಾಗಿ ಹೇಳಿದರು. ಆದರೆ ಇದಕ್ಕೆ ಪೀಠ ಒಪ್ಪಲಿಲ್ಲ.

ಮೇ ೨೯ರಂದು ಕೇಂದ್ರದ ಪರಿಸರ, ಅರಣ್ಯ ಇಲಾಖೆ “ಜಾನುವಾರು ಹಿಂಸೆ ತಡೆ (ನಿಯಮಗಳು ಮತ್ತು ಜಾನುವಾರು ಮಾರುಕಟ್ಟೆ) ನಿಯಮಗಳು ೨೦೧೭” ಎಂಬ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿತ್ತು. ಯಾವುದೇ ವ್ಯಕ್ತಿ ನೇರವಾಗಿ ಯಾವುದೇ ದಾಖಲೆಗಳಿಲ್ಲದೆ ಜಾನುವಾರುಗಳನ್ನು ವಧಾಗೃಹಕ್ಕೆ ಸಾಗಿಸುವಂತಿಲ್ಲ. ಜಾನುವಾರುಗಳ ಮಾರುಕಟ್ಟೆಯಿಂದ ಕೃಷಿ ಉದ್ದೇಶಕ್ಕಲ್ಲದೆ ಮಾಂಸದ ಉದ್ದೇಶಕ್ಕಾಗಿ ಖರೀದಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿತ್ತು.

No comments