ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ : ಬಿ ಎಸ್ ವೈ
ಬೆಂಗಳೂರು : ನಾಡಧ್ವಜ ವಿಚಾರದಲ್ಲಿ ರಾಜ್ಯಸರ್ಕಾರ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಪ್ರತ್ಯೇಕ ಧ್ವಜ ಇಲ್ಲ. ಆದರೆ, ಪ್ರತ್ಯೇಕ ಧ್ವಜ ಮಾಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳಲು ರಾಜ್ಯಸರ್ಕಾರ ಹೊರಟಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕೆಲ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.
ಅಸಹ್ಯ ತರುವ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು. ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನೇ ನಾವು ಕನ್ನಡ ಧ್ವಜಕ್ಕೂ ನೀಡುತ್ತೇವೆ. ರಾಜ್ಯೋತ್ಸವದ ದಿನ ಕನ್ನಡ ಧ್ವಜಾರೋಹಣ ನಡೆಸಿ ಗೌರವ ಸಲ್ಲಿಸುತ್ತೇವೆ ಎಂದರು.
ಸರ್ಕಾರದ ಹಗರಣಗಳನ್ನು ಮುಚ್ಚಿಹಾಕಲು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ನಾಡಧ್ವಜದ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಂದಿದ್ದಾರೆ ಎಂದವರು ಟೀಕಿಸಿದರು.
ಬಿಜೆಪಿ ಕನ್ನಡ ಹಾಗೂ ಕನ್ನಡಿಗರ ಪರವಾಗಿರುವ ಪಕ್ಷ, ಸಿದ್ದರಾಮಯ್ಯನವರು ನಾಡಧ್ವಜ ವಿಚಾರವನ್ನು ದೊಡ್ಡದು ಮಾಡುವ ಪ್ರಯತ್ನ ಸರಿಯಲ್ಲ ಒಂದು ದೇಶದಲ್ಲಿ ಒಂದೇ ಧ್ವಜ ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.
ಜೈಲಿನ ಅಕ್ರಮಗಳನ್ನು ಬಯಲು ಮಾಡಿದ ಡಿಐಜಿ ರೂಪಾ ಅವರಿಗೆ ಸತ್ಯ ಬಯಲು ಮಾಡಿದ್ದರೆ ವರ್ಗಾವಣೆ ಶಿಕ್ಷೆಯನ್ನು ಸರ್ಕಾರ ನೀಡಿದೆ. ಇಂತಹ ಪ್ರಕರಣಗಳಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಧ್ವಜದ ವಿಚಾರವನ್ನು ತಂದಿದ್ದಾರೆ ಎಂದು ಆರೋಪಿಸಿದರು.
No comments