Breaking News

ರಾಜಕೀಯ ಅಸ್ತ್ರವಾಗಿ ಕನ್ನಡ ಧ್ವಜದ ವಿವಾದ ಸೃಷ್ಟಿಸಿದರೇ ಸಿಎಂ ಸಿದ್ದರಾಮಯ್ಯ ?



ಬೆಂಗಳೂರು : ಹಿಂದೂ ಮತಗಳ ಧೃವೀಕರಣ, ದಲಿತರ ಓಲೈಕೆ, ಮೇಲ್ವರ್ಗದ ಬೆಂಬಲ, ಮೋದಿ ಅಲೆ, ಯಶಸ್ವಿಯಾಗುತ್ತಿರುವ ವಿಸ್ತಾರಕ್‍ನಿಂದ ತುಸು ಧೃತಿಗೆಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಆಸ್ಮಿತೆಯನ್ನು ಬಿಜೆಪಿ ಮೇಲೆ ಎತ್ತಿ ಕಟ್ಟಿದರ…?  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನರೇಂದ್ರ ಮೋದಿ ಅಲೆ, ದಲಿತರ ಮನೆಯಲ್ಲಿ ಭೋಜನ, ಮನೆ ಮನೆಗೆ ತೆರಳಿ ಪಕ್ಷವನ್ನು ಬಲಪಡಿಸುತ್ತಿರುವ ವಿಸ್ತಾರಕ್‍ನಂತಹ ಕಾರ್ಯಕ್ರಮಗಳು ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಲು ಅನುಕೂಲವಾಗಿವೆ.

ಈ ಬೆಳವಣಿಗೆಗಳಿಂದ ತುಸು ಗಲಿಬಿಲಿಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಕನ್ನಡ ವಿರೋಧಿ ಅಸ್ತ್ರ ಬಳಸಲು ವ್ಯವಸ್ಥಿತ ತಂತ್ರ ಹೆಣೆದಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಏಕೆಂದರೆ ನಮ್ಮ ಸಂವಿಧಾನ ಹಾಗೂ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನೀಡಿರುವ ತೀರ್ಪು ಸಿದ್ದರಾಮಯ್ಯನವರಿಗೆ ಅರಿವಿಲ್ಲ ಎಂದೇನಲ್ಲ. ಸ್ವತಃ ಕಾನೂನು ತಜ್ಞರೂ ಆಗಿರುವ ಅವರಿಗೆ ರಾಷ್ಟ್ರ ಧ್ವಜ ಹೊರತುಪಡಿಸಿದರೆ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ನೀಡುವುದಿಲ್ಲ ಎಂಬ ಸೂಕ್ಷ್ಮತೆ ಚೆನ್ನಾಗಿಯೇ ತಿಳಿದಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2011ರಲ್ಲಿ ನಾಡಧ್ವಜಕ್ಕೆ ಮಾನ್ಯತೆ ನೀಡಬೇಕೆಂದು ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರ ನೀಡಿದ್ದ ಕೇಂದ್ರ ಸರ್ಕಾರ ನಮ್ಮ ಸಂವಿಧಾನದಲ್ಲಿ ರಾಷ್ಟ್ರಧ್ವಜ ಹೊರತುಪಡಿಸಿದರೆ ಪ್ರತ್ಯೇಕ ನಾಡಧ್ವಜಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಕನ್ನಡಿಗರ ಭಾವನೆಗಳನ್ನು ಕೆಣಕುವಂತಹ ಅಸ್ತ್ರವನ್ನು ವಿರೋಧ ಪಕ್ಷಗಳ ಮೇಲೆ ಎಸೆದಿದ್ದಾರೆ ಸಂವಿಧಾನದ 370ನೇ ವಿಧಿಯ ಪ್ರಕಾರ ಜಮ್ಮುಕಾಶ್ಮೀರ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯಗಳಿಗೆ ಈವರೆಗೂ ಎರಡು ಧ್ವಜಗಳನ್ನು ಮಾನ್ಯ ಮಾಡಿಲ್ಲ. ಇದೆಲ್ಲವನ್ನೂ ಅರಿತಿರುವ ಸಿದ್ದರಾಮಯ್ಯ ಯಾವ ಕಾರಣಕ್ಕಾಗಿ ನಾಡಧ್ವಜವನ್ನು ಅಧಿಕೃತಗೊಳಿಸುವಂತಹ ದುಸ್ಸಾಹಕ್ಕೆ ಕೈ ಹಾಕಿದರು ಎಂಬುದು ಯಾರಿಗೂ ತಿಳಿಯುತ್ತಿಲ್ಲ.
ವಿರೋಧ ಪಕ್ಷಗಳ ಮೇಲೆ ಬ್ರಹ್ಮಾಸ್ತ್ರ:

ಮೂಲಗಳ ಪ್ರಕಾರ ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡೇ ರಾಜ್ಯ ಸರ್ಕಾರ ಇಂತಹ ಅಸ್ತ್ರ ಬಳಸಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ನಾಡಧ್ವಜಕ್ಕೆ ಕೇಂದ್ರ ಸರ್ಕಾರ ಮಾನ್ಯ ಮಾಡುವುದಿಲ್ಲ ಎಂಬುದು ಗೊತ್ತಿದ್ದರೂ ವಿರೋಧ ಪಕ್ಷಗಳು ವಿರೋಧಿಸಿದರೆ ಕನ್ನಡಿಗರ ವಿರೋಧವನ್ನು ಪ್ರತಿಪಕ್ಷಗಳು ಎದುರಿಸಬೇಕಾಗುತ್ತದೆ. ಸಹಜವಾಗಿ ಚುನಾವಣೆಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ರಾಜ್ಯ ಸರ್ಕಾರದ್ದು.

ಈ ಹಿಂದೆ ಇದೇ ರೀತಿ ಭಾಷಾ ವಿಂಗಡಣೆ ನಂತರ ವಿಭಜನೆಯಾದ ರಾಜ್ಯಗಳು ತಮಗೂ ಕೂಡ ಪ್ರತ್ಯೇಕ ನಾಡಧ್ವಜ ನೀಡಬೇಕೆಂಬ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡಿದ್ದವು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿ ತ್ರಿವರ್ಣ ಧ್ವಜ ಹೊರತುಪಡಿಸಿ ಬೇರೆ ಧ್ವಜಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.  ಇದೀಗ ಸಿದ್ದರಾಮಯ್ಯ ಕನ್ನಡಿಗರ ಭಾವನೆಯನ್ನು ಕೆಣಕುವಂತಹ ದುಸ್ಸಾಹಸಕ್ಕೆ ಕೈ ಹಾಕಿ ವಿರೋಧ ಪಕ್ಷಗಳ ಮೇಲೆ ಬ್ರಹ್ಮಾಸ್ತ್ರ ಬಳಸಲು ಮುಂದಾಗಿದ್ದಾರೆ.

-via ee sanje

No comments