Breaking News

ಸಂಘ ಪರಿವಾರದ ವಿರುದ್ಧ ಕಿಡಿ ಕಾರಿ ಪೊಲೀಸರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಿಎಂ



ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳನ್ನು ನಿಗ್ರಹಿಸುವಲ್ಲಿ ವಿಫಲರಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ,ಕೋಮು ಗಲಭೆ ಹುಟ್ಟು ಹಾಕುವ ಶಕ್ತಿಗಳನ್ನು  ದಮನ ಮಾಡಲು ಗುಂಡಾ ಅಥವಾ ಕೋಕಾ ಕಾಯ್ದೆಯನ್ವಯ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ.

ಹರಿಶೇಖರನ್‌ಗೆ ತರಾಟೆ

ಮಂಗಳೂರು ಗಲಭೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಐಜಿ ಹರಿಶೇಖರನ್ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

ದ.ಕ.ಕನ್ನಡ ಜಿಲ್ಲೆಯಲ್ಲಿ ಇಷ್ಟೆಲ್ಲಾ ಘಟನೆ ನಡೆಯುವಾಗ ನೀವು ತೆಗೆದುಕೊಂಡ ಕ್ರಮ ಏನು? ಯಾಕಾಗಿ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿಲ್ಲ ಎಂದು ಹರಿಶೇಖರನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವ ಮತೀಯ ಗೂಂಡಾಗಳ ಮೇಲೆ ನಿಗಾ ಇಡಬೇಕು ಹಾಗೂ ಮಂಗಳೂರಿಗೆ ತಕ್ಷಣ ಪೊಲೀಸ್ ಮಹಾನಿರ್ದೇಶಕ ಆರ್.ಕೆ ದತ್ತಾ ತೆರಳಿ ಶಾಂತಿಸಭೆ ನಡೆಸುವಂತೆ ಎಂದು ಅವರು ಇದೇ ಸಂದರ್ಭದಲ್ಲಿ ಸೂಚಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಘಟನೆಯಿಂದ ನೋವಾಗಿದೆ. ಮಂಗಳೂರು ಶಾಂತಿಪ್ರಿಯರ ನಾಡು. ಆದರೆ ಕೆಲವು ಮತೀಯ ಸಂಘಟನೆಗಳ ಪ್ರಚೋದನೆಯಿಂದ ಅಲ್ಲಿ ಕೋಮುಸಂಘರ್ಷ ನಡೆದಿದೆ. ಅದನ್ನು ಮಟ್ಟಹಾಕಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಅಗತ್ಯವಿದ್ದರೆ ಇಂತಹವರ ವಿರುದ್ಧ ಕೋಕಾ, ಗೂಂಡಾ ಕಾಯ್ದೆಯಡಿ ಬಂಧಿಸಿ ಗಡೀಪಾರು ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಯಾವುದೇ ಕೋಮುಸಂಘರ್ಷ ನಡೆದಾದ ಅದರ ಹಿಂದಿನ ಶಕ್ತಿಗಳನ್ನು ಗುರುತಿಸಬೇಕು. ಅದರ ಹಿಂದೆ ಇರುವ ಕಾಣದ ಕೈಗಳನ್ನು ಗುರುತಿಸಲು ಪೊಲೀಸರು ಮುಂದಾಗಬೇಕು. ಬಜರಂಗದಳ, ಆರ್‌ಎಸ್‌ಎಸ್,ಎಸ್‌ಡಿಪಿಐ ಮತ್ತಿತರ ಸಂಘಟನೆಗಳ ಕೋಮುಪ್ರಚೋದನೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿಷೇಧಾಜ್ಞೆ ಇದ್ದ ಸಂದರ್ಭದಲ್ಲಿ ಸಂಘಪರಿವಾರದ ಪ್ರತಿಭಟನೆಗೆ ಅವಕಾಶ ನೀಡಿದ ಬಗ್ಗೆ ಸಿಎಂ ಕಿಡಿಕಾರಿದರು . ಯಾರೂ ಕೂಡ ಕಾನೂನಿಗಿಂದ ದೊಡ್ಡವರಲ್ಲ. ಪ್ರತಿಯೊಂದು ಜಿಲ್ಲೆಗೂ ಒಬ್ಬೊಬ್ಬ ಎಡಿಜಿಪಿ ಅವರಿಗೆ ಹೊಣೆ ವಹಿಸಲಾಗಿದೆ. ಅವರು ಅಲ್ಲಿನ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಕಾಲಕಾಲಕ್ಕೆ ಪರಾಮರ್ಶೆ ನಡೆಸಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ರಾಜಕೀಯ ಲಾಭಕ್ಕೆ ಜನರ ಮತೀಯ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತದೆ. ಇವುಗಳ ಬಗ್ಗೆಯೂ ಪೊಲೀಸರು ಎಚ್ಚರವಹಿಸಬೇಕು ಎಂದು ತಿಳಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು.


No comments