ಹರಿಕೃಷ್ಣ ಬಂಟ್ವಾಳ್ ಸುಳ್ಳು ಹೇಳಿದರೇ ?
ಮಂಗಳೂರು : ‘ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರನ್ನು ನನ್ನ ಮದುವೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಕೀಳು ಪದ ಬಳಸಿ ನಿಂದಿಸಿದ್ದಾರೆ ಎಂಬ ಹರಿಕೃಷ್ಣ ಬಂಟ್ವಾಳರ ಆರೋಪ ನಿರಾಧಾರ’ ಎಂದು ಸುರತ್ಕಲ್ ರತ್ನ ಬೋರ್‌ವೆಲ್ಸ್‌ನ ರಾಜೇಶ್ ರಾವ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮದುವೆಯಲ್ಲಿ ಅಂತಹ ಘಟನೆ ನಡೆದಿದೆ ಎಂಬುದನ್ನು ನಂಬಲಾಸಾಧ್ಯ. ನಡೆದಿದ್ದರೆ ನನ್ನ ಗಮನಕ್ಕೆ ಬರುತ್ತಿತ್ತು. ಸುರತ್ಕಲ್ ಬಂಟರ ಭವನದಲ್ಲಿ ನನ್ನ ಮದುವೆ ನಡೆದಿದ್ದು ಫೆ.೯ರಂದು, ಬಂಟ್ವಾಳ್ ತಿಳಿಸಿದಂತೆ ಫೆ.೬ರಂದು ಅಲ್ಲ. ಹರಿಕೃಷ್ಣ ಬಂಟ್ವಾಳ ನನ್ನ ಹೆಸರು ಉಲ್ಲೇಖಿಸಿರುವುದರಿಂದ ನಾನು ಸ್ಪಷ್ಟೀಕರಣ ನೀಡುತ್ತಿದ್ದೇನೆ’ ಎಂದರು.
ಸಚಿವ ರೈಯವರಿಗೆ ಪೂಜಾರಿ ಬಗ್ಗೆ ಅಪಾರ ಗೌರವವಿದೆ. ನಾನು ಕೂಡಾ ಅವರನ್ನು ಗೌರವದಿಂದ ನೋಡುತ್ತೇನೆ. ಆಸ್ಕರ್, ಮೊಲಿ ಮತ್ತು ಪೂಜಾರಿಯವರು ಕರಾವಳಿಯ ಪ್ರಭಾವಿ ರಾಜಕೀಯ ನಾಯಕರು. ದೇಶದಲ್ಲೂ ಇವರಿಗೂ ಉತ್ತಮ ಹೆಸರಿದೆ. ನನ್ನ ಮದುವೆಯಲ್ಲಿ ಪೂಜಾರಿಯವರನ್ನು ರೈ ನಿಂದಿಸಿದ್ರೆ ಯಾರ ಮೂಲಕವಾದರೂ ನನ್ನ ಗಮನಕ್ಕೆ ಬರಬೇಕಿತ್ತು. ವಿವಾಹ ನಡೆದು ಐದು ತಿಂಗಳಾಗಿದೆ. ಈಗ ಆ ವಿಷಯವನ್ನು ಪ್ರಸ್ತಾಪಿಸಿರುವ ಉದ್ದೇಶ ಏನೆಂದು ಗೊತ್ತಿಲ್ಲ ಎಂದು ಹೇಳಿದರು.
ಸಂಜೆ ೭ಕ್ಕೆ ಕಾರ್ಯಕ್ರಮ ಆರಂಭಗೊಂಡು ೧೦ಕ್ಕೆ ಮುಗಿದಿದೆ. ರೈಯವರು ಕೊನೆಗೆ ಬಂದು ಆಶೀರ್ವದಿಸಿ ಊಟ ಮಾಡಿ ಸುಮಾರು ೨೦ ನಿಮಿಷದಲ್ಲಿ ನಿರ್ಗಮಿಸಿದ್ದಾರೆ, ಅಷ್ಟು ಕಡಿಮೆ ಸಮಯದಲ್ಲಿ ಇವರ ಜೊತೆಗೆ ಮಾತಾಡಿದ್ದಾದರೂ ಹೇಗೆ ಎಂದು ಕೇಳಿದ ಅವರು, ಹರಿಕೃಷ್ಣ ಬಂಟ್ವಾಳರವರು ಈ ಹಿಂದೆ ಆಸ್ಕರ್ ಫರ್ನಾಂಡಿಸ್ ಮತ್ತವರ ಪತ್ನಿಯ ಕುರಿತು ಕೇವಲವಾಗಿ ಮಾತನಾಡಿದ್ದಾರೆ. ಅದಕ್ಕೆ ಯೂಟ್ಯೂಬ್‌ನಲ್ಲಿ ಸಾಕ್ಷಿ ಇದೆ. ಆ ಬಗ್ಗೆ ನನಗೆ ನೋವಿದೆ. ಆಸ್ಕರ್ ನಮ್ಮ ಕುಟುಂಬದ ಸ್ನೇಹಿತರು. ಆದರೆ ರೈ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷಿ ಏನಿದೆ ಎಂದು ಕೇಳಿದರು. ರೈ ನಿಂದಿಸಿರುವ ಕುರಿತು ಅರುಣ್ ಕುವೆಲ್ಲೋ ಹೇಳಿದ್ದರೆ ಅವರು ಪತ್ರಿಕಾಗೋಷ್ಠಿಯಲ್ಲಿ ಯಾಕಿರಲಿಲ್ಲ. ನಾನು ಮದುವೆ ವಿಡಿಯೋ ಕೂಡಾ ಪರಿಶೀಲಿಸಿದ್ದೇನೆ. ಘಟನೆ ಕುರಿತು ಕುವೆಲ್ಲೋ ಬಳಿ ಕೇಳಲು ಕರೆ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲ ಎಂದರು.
No comments