Breaking News

ಕರ್ನಾಟಕ ಧ್ವಜಕ್ಕೆ ಹೊಸ ವಿನ್ಯಾಸ : ಕಾನೂನು ಮಾನ್ಯತೆಗೆ ಚಿಂತನೆ ನಡೆಸುತ್ತಿರುವ ರಾಜ್ಯ ಸರ್ಕಾರ



ಬೆಂಗಳೂರು : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದಲ್ಲಿ “ಒಂದು ರಾಷ್ಟ್ರ” ಮಂತ್ರ ಜಪಿಸುತ್ತಾ ಹಿಂದಿ ಹೇರಿಕೆಗೆ ತೆರೆಮರೆಯ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ, ಕರ್ನಾಟಕಕ್ಕೆ ಪ್ರತ್ಯೇಕ “ರಾಜ್ಯ ಧ್ವಜ” ನಿರ್ಮಾಣಕ್ಕೆ ಮುಂದಾಗಿದೆ.

ರಾಜ್ಯಕ್ಕೆ ಪ್ರತ್ಯೇಕ ಚಿಹ್ನೆ ಮತ್ತು ಗುರುತು ಇರಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಒಂಭತ್ತು ಮಂದಿಯ ಸಮಿತಿಯೊಂದನ್ನು ರಚಿಸಿ, ಧ್ವಜ ವಿನ್ಯಾಸ ಮಾಡುವಂತೆ ಸೂಚಿಸಿದೆ. ಮಾತ್ರವಲ್ಲ ಇದಕ್ಕಾಗಿ ಕಾನೂನು ಅನುಮೋದನೆಯನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ.

ಒಂದು ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ತಯಾರಾದರೆ ದೇಶದಲ್ಲಿ ಜಮ್ಮು-ಕಾಶ್ಮೀರ ಹೊರತುಪಡಿಸಿ ಪ್ರತ್ಯೇಕ ರಾಜ್ಯಧ್ವಜ ಹೊಂದಿದ ರಾಜ್ಯ ಎಂಬ ಖ್ಯಾತಿಗೂ ಕರ್ನಾಟಕ ಪಾತ್ರವಾಗಲಿದೆ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ೩೭೦ನೇ ನಿಯಮದನ್ವಯ ವಿಶೇಷ ಸ್ಥಾನಮಾನ ಇರುವುದರಿಂದ ಅಲ್ಲಿಗೆ ಪ್ರತ್ಯೇಕ ಧ್ವಜ ಇದೆ.

೨೦೧೮ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಇಂತಹ ಪ್ರಯತ್ನಕ್ಕೆ ಕೈಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಸಕ್ತ ಕನ್ನಡದ ಧ್ವಜ ಕೆಂಪು ಮತ್ತು ಹಳದಿ ಬಣ್ಣದಲ್ಲಿದೆ. ಆದರೆ ಈ ಬಾವುಟಕ್ಕೆ ಯಾವುದೇ ಕಾನೂನಾತ್ಮಕ ಸ್ಥಾನಮಾನವಿಲ್ಲ. ೨೦೧೨ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕರ್ನಾಟಕ ಹೈಕೋರ್ಟ್‌ಗೆ ಅಂದಿನ ರಾಜ್ಯ ಸರ್ಕಾರ ಹೇಳಿಕೆಯೊಂದನ್ನು ನೀಡಿ, ಕನ್ನಡದ ಧ್ವಜವನ್ನು ಅಧಿಕೃತ ಎಂದು ಹೇಳಲಾಗುವುದಿಲ್ಲ. ಇದು ದೇಶದ ಸಮಗ್ರತೆ ಮತ್ತು ಏಕತೆಗೆ ಈ ಭಾವುಟ ಧಕ್ಕೆ ತರಲಿದೆ ಎಂದು ಕನ್ನಡ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಈ ವಿಷಯ ಅಂದಿನ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ, ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಇರಲು ಕಾನೂನಿನಲ್ಲಿ ಅವಕಾಶವಿಲ್ಲ. ನಮ್ಮ ರಾಷ್ಟ್ರ ಧ್ವಜ ದೇಶದ ಸಮಗ್ರತೆ ಮತ್ತು ಏಕತೆಯ ಸಂಕೇತ. ಒಂದು ವೇಳೆ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ನೀಡಿದರೆ ರಾಷ್ಟ್ರಧ್ವಜದ ಸ್ಥಾನಮಾನಕ್ಕೆ ಧಕ್ಕೆ ಬರಲಿದೆ. ಇದು ಪ್ರಾದೇಶಿಕ ಭಾವನೆಗಳ ಅತಿರೇಕಗಳಿಗೆ ಕಾರಣವಾಗಲಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಾಗುತಿದೆ ಎಂಬ ಆರೋಪ ಕನ್ನಡ ಸಂಘಟನೆಗಳಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಉಪಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಈ ನಡೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿರೋಧ ವ್ಯಕ್ತಪಡಿಸಿದ್ದು, ಭಾರತ ಒಂದು ದೇಶ. ಇಲ್ಲಿ ಎರಡು ಬಾವುಟಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಹೊಸ ಧ್ವಜ ರಚನೆ ಸಂಬಂಧ ಜೂನ್ ೬ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರ ನಾಮನಿರ್ದೇಶನದಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅವರು ಈ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಈ ಆದೇಶಕ್ಕೆ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಅನ್ನಪೂರ್ಣ ಅವರು ಸಹಿ ಹಾಕಿದ್ದಾರೆ. ಸಮಿತಿ ಪ್ರತ್ಯೇಕ ಧ್ವಜದ ವಿನ್ಯಾಸ ಮಾಡಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

No comments