Breaking News

ಇಂದಿರಾ ಕ್ಯಾಂಟೀನ್ ನಾಳೆ ರಾಹುಲ್ ಲೋಕಾರ್ಪಣೆ

ಬೆಂಗಳೂರು :ಕಡಿಮೆ ಬೆಲೆಯಲ್ಲಿ ಶ್ರೀಸಾಮಾನ್ಯನಿಗೆ ಆಹಾರ ಒದಗಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ‘ಇಂದಿರಾ ಕ್ಯಾಂಟೀನ್’ ನಾಳೆ ಲೋಕಾರ್ಪಣೆಯಾಗಲಿದೆ.

ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್‌ನ ಕನಕನಪಾಳ್ಯ ಮುಖ್ಯ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ನಾಳೆ ಬೆಳಿಗ್ಗೆ 11.30ಕ್ಕೆ ಲೋಕಾರ್ಪಣೆ ಮಾಡಿ ನಂತರ ಮಧ್ಯಾಹ್ನ 12.30ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವರು.

ಬಿಬಿಎಂಪಿ ಪ್ರತಿ ವಾರ್ಡ್‌ನಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಿದ್ದು, ಪ್ರತಿ ಕ್ಯಾಂಟೀನ್‌ಗೂ ಸುಮಾರು 28.5 ಲಕ್ಷ ರೂ. ವೆಚ್ಚವಾಗುತ್ತದೆ. ಪ್ರಸ್ತುತ 101 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಪೂರ್ಣವಾಗಲಿದ್ದು, ನಾಳೆ ಈ ಎಲ್ಲಾ 101 ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡ‌ಲಿವೆ.
ಈ ಕ್ಯಾಂಟೀನ್‌ನಲ್ಲಿ ತಿಂಡಿಗೆ 5 ರೂ. ತೆರವಿದ್ದು, ಊಟಕ್ಕೆ 10 ರೂ. ದರ ನಿಗದಿಯಾಗಿದೆ. ಪ್ರತಿ ಕ್ಯಾಂಟೀನ್‌ನಲ್ಲೂ ಎಷ್ಟು ಊಟ ಲಭ್ಯವಿದೆ ಎಂಬ ಬಗ್ಗೆ ಡಿಜಿಟಲ್ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಜತೆಗೆ ಪ್ರತಿ ಕ್ಯಾಂಟೀನ್‌ಗೂ ಆರೋಗ್ಯಾಧಿಕಾರಿ ಇರಲಿದ್ದು, ಕಾಲ ಕಾಲಕ್ಕೆ ಆಹಾರ ಸುರಕ್ಷತೆಯ ತಪಾಸಣೆಯೂ ನಡೆಯಲಿದೆ. ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲೂ ಸಿಸಿಟಿವಿಯನ್ನು ಅಳವಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ವೇಣುಗೋಪಾಲ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮೇಯರ್ ಪದ್ಮಾವತಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಸಚಿವರು, ಶಾಸಕರು, ಬಿಬಿಎಂಪಿ ಸದಸ್ಯರು ಪಾಲ್ಗೊಳ್ಳುವರು.

No comments