Breaking News

ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದೆ ಕೇರಳದ ಶಾಲೆಯಲ್ಲಿ ಧ್ವಜಾರೋಹಣ ನಡೆಸಿದ ಮೋಹನ್ ಭಾಗವತ್




ತಿರುವನಂತಪುರ ' ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್‌ರವರು ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದೆ ಕೇರಳದ ಶಾಲೆಯಲ್ಲಿ ಧ್ವಜಾರೋಹಣ ನಡೆಸಿರುವುದು ವಿವಾದದ ಕಿಡಿ ಹಬ್ಬಿಸಿದೆ. ಇದು ಕೇರಳದಲ್ಲಿ ಎಡಪಕ್ಷ ಹಾಗೂ ಆರ್‌ಎಸ್‌ಎಸ್ ನಡುವಿನ ಸಂಘರ್ಷಕ್ಕೆ ಮತ್ತಷ್ಟು ಕಾವು ತುಂಬಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇರಳದ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಧ್ವಜಾರೋಹಣ ಕಾರ್ಯಕ್ರಮ ನಿಗದಿಯಾಗಿತ್ತು. ಇದನ್ನು ಶತಾಯ-ಗತಾಯ ತಪ್ಪಿಸಲು ಎಡಪಕ್ಷಗಳ ಸರ್ಕಾರ ಚುನಾಯಿತ ಪ್ರತಿನಿಧಿಗಳು ಅಥವಾ ಶಾಲಾ ಆಡಳಿತ ಮಂಡಳಿಯವರು ಮಾತ್ರ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. ಬೇರೆಯವರಿಂದ ರಾಷ್ಟ್ರ ಧ್ವಜಾರೋಹಣ ಮಾಡಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿತ್ತು.

ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.  ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ ಸಂಬಂಧ ಶಾಲಾ ಆಡಳಿತ ಮಂಡಳಿ ವಿರುದ್ಧ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಧ್ವಜಾರೋಹಣ ನೆರವೇರಿಸಿದ ಶಾಲೆ ಸಂಘ ಪರಿವಾರದ ಪರ ಇರುವ ಆಡಳಿತ ಮಂಡಳಿಗೆ ಸೇರಿದ್ದಾಗಿದೆ. ಆದರೆ, ಈ ಶಾಲೆಗೆ ಸರ್ಕಾರದ ಅನುದಾನ ಸಿಗುತ್ತಿದ್ದು, ಸರ್ಕಾರದ ಅನುದಾನ ಪಡೆಯುವ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಆದೇಶ ಅನ್ವಯವಾಗುತ್ತದೆ ಎಂಬ ವಾದಗಳು ಕೇಳಿಬರುತ್ತಿದೆ.

No comments