Breaking News

ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಸಾರ್ಥಕ ಸಮಾವೇಶಕ್ಕೆ ಹರಿದು ಬಂದ ಜನಸಾಗರ



ಬೆಂಗಳೂರು : ಕಳೆದ 2 ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಾರ್ಥಕ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.

ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ಭಾಷಣ ಕೇಳಲು ನಗರದ ಮೂಲೆ ಮೂಲೆಗಳಿಂದ ಸಹಸ್ರಾರು ಮಂದಿ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗಮಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಿನಿಂದಲೇ ರಣಕಹಳೆ ಮೊಳಗಿಸಿದೆ.

ವರ್ಷಾಂತ್ಯದಲ್ಲಿ ಇಲ್ಲವೆ, ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ನಾಯಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈಗಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ, ಕಿರಿಯ ನಾಯಕರು ಪಕ್ಷದ ನಾಯಕನ ಅಣತಿಯನ್ನು ಪಾಲಿಸಲು ಹಾಗೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಇನ್ನಿಲ್ಲದ ಶ್ರಮ ಹಾಕಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೆ ರಾಯಚೂರಿನಲ್ಲಿ ಬೃಹತ್ ಸಮಾವೇಶ ಮಾಡಿದ ಬಳಿಕ ಇಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಾರ್ಥಕ ಸಮಾವೇಶಕ್ಕೆ ಜನಸಾಗರ ಆಗಮಿಸುವ ಮೂಲಕ ತಮ್ಮ ನೆಚ್ಚಿನ ನಾಯಕ ರಾಹುಲ್‌ಗಾಂಧಿ ಅವರ ಭಾಷಣ ಆಲಿಸಿದರು.

ಬೃಹತ್ ವೇದಿಕೆ
ರಾಹುಲ್‌ಗಾಂಧಿ ಅವರ ಸಾರ್ವಜನಿಕ ಸಭೆಗಾಗಿ ಬೃಹತ್ ವೇದಿಕೆಯನ್ನು ಹಾಕಲಾಗಿದ್ದು, ಮಳೆಯ ಕಾರಣ ಮಳೆ ನಿರೋಧಕ ಟೆಂಟ್‌ನ್ನು ಹಾಕಲಾಗಿತ್ತು. ಮಳೆ ಬಂದರೂ ಸಭೆಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿತ್ತು. ನ್ಯಾಷನಲ್ ಕಾಲೇಜಿನ ಅಕ್ಕ-ಪಕ್ಕದ ರಸ್ತೆಗಳು, ಕಾಂಗ್ರೆಸ್ ಧ್ವಜ ಹಾಗೂ ರಾಹುಲ್‌ಗಾಂಧಿಯವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳಿಂದ ತುಂಬಿ ಹೋಗಿತ್ತು. ಇಡೀ ಪ್ರದೇಶ ಕಾಂಗ್ರೆಸ್‌ಮಯವಾಗಿತ್ತು.

ಈ ಕಾರ್ಯಕ್ರಮದಿಂದ ಬಸವನಗುಡಿ, ಕೆಆರ್‌ ಮಾರುಕಟ್ಟೆ, ಕಾರ್ಪೊರೇಷನ್, ಜಯನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾ‌ಡುವಂತಾಯಿತು.

ನ್ಯಾಷನಲ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಈ ಕಾರ್ಯಕ್ರಮಕ್ಕೆ ಜನ ನೂರಾರು ವಾಹನಗಳಲ್ಲಿ ಆಗಮಿಸಿದ ಕಾರಣ ಲಾಲ್‌ಬಾಗ್ ರಸ್ತೆ, ಕೆಆರ್ ರಸ್ತೆ, ಬಸವನಗುಡಿ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿ ನಿಧಾನಗತಿಯ ವಾಹನ ಸಂಚಾರದಿಂದ ವಾಹನ ಸವಾರರು ಬಹು ಹೊತ್ತು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು.

ಮುಗಿಲು ಮುಟ್ಟಿದ ಘೋಷಣೆ
ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಪಾಲ್ಗೊಂಡಿದ್ದ ಜನ ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಪರ ಜೈಕಾರದ ಘೋಷಣೆಗಳನ್ನು ಕೂಗಿದ್ದು, ಘೋಷಣೆಗಳು ಮುಗಿಲು ಮುಟ್ಟಿದ್ದವು.


loading...

No comments