Breaking News

ವಿದೇಶಿ ಹಕ್ಕಿ ಬೇಟೆ ಮಾಡಿ ಸಾಮಾಜಿಕ ಜಾಲದಲ್ಲಿ ಪೋಸು ನೀಡಿದವ ಜೈಲು ಪಾಲು


ಕೆ.ಆರ್‌.ಪೇಟೆ: ಮೋಜಿಗಾಗಿ ವಿದೇಶಿ ಹಕ್ಕಿಯನ್ನು ಬೇಟೆಯಾಡಿದ ಫೋಟೋವನ್ನು ಫೇಸ್‌ಬುಕ್‌ ಮತ್ತು ವ್ಯಾಟ್ಸಪ್‌ನಲ್ಲಿ ಅಪ್‌ಲೋಡ್‌ ಮಾಡಿದ ವ್ಯಕ್ತಿಯೊಬ್ಬ ಅರಣ್ಯಾಧಿಕಾರಿಗಳಿಗೆ ಸುಲಭದಲ್ಲಿ ಸಿಕ್ಕಿಬಿದ್ದಿದ್ದಾನೆ.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀಕಂಠನಗರದ ನಿವಾಸಿ ನಾಗರಾಜು ಬಂಧಿತ ಆರೋಪಿ. ಈತನಿಗೆ ಸಾಥ್‌ ನೀಡಿದ ಇನ್ನಿತರ ಮೂವರು ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.


ಕಳೆದ ಭಾನುವಾರ(ಆ.13) ನಾಗರಾಜು ಮತ್ತು ಅವರ ಸ್ನೇಹಿತರು ಕೆ.ಆರ್‌.ಪೇಟೆ ತಾಲೂಕಿನ ನಗರೂರು-ಮಾರ್ಗೋನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ವಳಗೆರೆಮೆಣಸ ಗ್ರಾಮದ ಕೆರೆಯಲ್ಲಿ ಪೇಂಟೆಡ್‌ ಸ್ಟ್ರೋಕ್‌ ಎಂಬ( ಕೊಕ್ಕರೆ ರೀತಿಯ ಪಕ್ಷಿ) ಪಕ್ಷಿಯನ್ನು ನಾಡ ಬಂದೂಕು ಬಳಸಿ ಬೇಟೆಯಾಡಿದ್ದಾರೆ. ನಂತರ ಅದನ್ನ್ನು ಶ್ರವಣಬೆಳಗೊಳ ಬಳಿಯಿರುವ ಕಾಂತರಾಜಪುರ ಗ್ರಾಮದ ತೋಟವೊಂದರ ಅಡುಗೆ ತಯಾರಿಸಿ ತಿಂದಿದ್ದಾರೆ. ಬಳಿಕ ಅದೇ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ಪಕ್ಷಿ ಜತೆ ತೆಗೆಸಿಕೊಂಡ ಫೋಟೋವನ್ನು ನಾಗರಾಜು ತನ್ನ ಫೇಸ್‌ಬುಕ್‌ ಮತ್ತು ವ್ಯಾಟ್ಸಪ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಯಾವಾಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಯಿತೋ ಎಚ್ಚೆತ್ತ ಅರಣ್ಯಾಧಿಕಾರಿಗಳು ಈ ಫೋಟೋ ಹಿಂದಿನ ವ್ಯಕ್ತಿಯನ್ನು ಪತ್ತೆಹಚ್ಚಲು ವಲಯ ಅರಣ್ಯಾಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು.
ಮೊಬೈಲ್‌ನ ವ್ಯಾಟ್ಸಪ್‌ನ ನಂಬರ್‌ ಜಾಡು ಹಿಡಿದು ದೂರವಾಣಿ ಕರೆ ಮಾಡಿದ ಅರಣ್ಯಾಧಿಕಾರಿಗಳು, ಆರೋಪಿ ನಾಗರಾಜುವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷ ಣೆ ಕಾಯ್ದೆ 1972ರ ಪ್ರಕಾರ ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ನಾಗರಾಜು ಅವನ ಹೇಳಿಕೆಯ ಪ್ರಕಾರ ಆತನಿಗೆ ಇನ್ನು ಮೂವರು ಸಾಥ್‌ ನೀಡಿದ್ದಾರೆ. ಅವರ ಪತ್ತೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಂಧಿತ ನಾಗರಾಜುನನ್ನು ಪಟ್ಟಣದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





loading...

No comments