Breaking News

ಐಟಿ ದಾಳಿ ನಡೆಸಲು ಸಚಿವ ಡೀಕೇಶಿ ಭಯೋತ್ಪಾದಕನೇ ಜನಾರ್ದನ ಪೂಜಾರಿ ಪ್ರಶ್ನೆ




ಮಂಗಳೂರು : “ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ, ಕಚೇರಿಗಳ ಮೇಲೆ ನಡೆಸಿರುವ ಐಟಿ ದಾಳಿ ಪೂರ್ವನಿಯೋಜಿತ ಸಂಚು. ಈ ರೀತಿ ದಾಳಿ ನಡೆಸಲು ಅವರೇನು ಉಗ್ರಗಾಮಿಯೇ” ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, “ರಾಜ್ಯ  ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ದಾಳಿ ನಡೆಸಿದಂತಿದೆ. ರಾಜ್ಯ ಸರಕಾರ ಡಿ ಕೆ ಶಿವಕುಮಾರ್ ಮೇಲೆ ದ್ವೇಷ ಸಾಧನೆಯ ರಾಜಕೀಯ ಮಾಡುತ್ತಿದೆ. ಮೋದಿ ಹಿಟ್ಲರಿನಂತೆ ವರ್ತಿಸುತ್ತಿದ್ದಾರೆ. ಐಟಿ ಇಲಾಖೆ ಯಾವ ಪಕ್ಷ, ವ್ಯಕ್ತಿಗೆ ಸೇರಿದ ಇಲಾಖೆ ಅಲ್ಲ, ಅದನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳುವುದು ಸರಿಯಲ್ಲ” ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.

“ಐಟಿ ದಾಳಿಗಳಿಗೂ ಮುನ್ನ ಕೆಲ ಪ್ರಕ್ರಿಯೆಗಳನ್ನು ನಡೆಸಬೇಕು. ಅದೆಲ್ಲ ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಅದೇನನ್ನೂ ಮಾಡದೇ ಏಕಾಏಕಿ ಬೆಂಗಳೂರು, ದೆಹಲಿಯ ಕಚೇರಿಗೆ ಮುತ್ತಿಗೆ ಹಾಕಿರುವುದು ಸರಿಯಲ್ಲ” ಎಂದರು.

“ಇಂದು ಡಿ ಕೆ ಶಿವಕುಮಾರ್, ನಾಳೆ ಸೋನಿಯಾ, ನಾಡಿದ್ದು ರಾಹುಲ್ ಗಾಂಧಿ ಹೀಗೆ ಐಟಿ ದಾಳಿ ನಡೆಸುತ್ತದೆ. ಪ್ರಧಾನಿ ಮೋದಿ ಅವರನ್ನು ಯಾರೂ ಕೇಳುವವರೇ ಇಲ್ಲವೇ ? ನಾನು ಕೇಂದ್ರ ಸಚಿವನಾಗಿದ್ದಾಗ ಆದಾಯ ತೆರಿಗೆ ಇಲಾಖೆಗಳು ನನ್ನ ಸುಪರ್ದಿಯಲ್ಲಿದ್ದರೂ ನಾನು ಇವುಗಳನ್ನು ದುರುಪಯೋಗ ಮಾಡಿಕೊಂಡವನಲ್ಲ. ದಾಳಿ ನೆಪದಲ್ಲಿ ಸಿಆರ್ಪಿಎಫ್ ಬಳಸಿಕೊಂಡಿರುವುದು ಇದು ಅಧಿಕಾರ ದುರುಪಯೋಗ” ಎಂದರು.


loading...

No comments