Breaking News

ಕಾರ್ಟೂನ್ ಸ್ಟಿಕ್ಕರ್‌ನಲ್ಲಿ ಡ್ರಗ್ಸ್ ಕಾಸರಗೋಡು ಪೊಲೀಸರಿಂದ ತನಿಖೆ



ಮಂಗಳೂರು : ಕಾರ್ಟೂನ್ ಸ್ಟಿಕ್ಕರ್‌ನಲ್ಲೂ ಮಾದಕ ವಸ್ತುಗಳನ್ನು ಬಳಕೆ ಮಾಡುವ ಆಘಾತಕಾರಿ ಅಂಶ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ. ಶಾಲಾ ವಿದ್ಯಾರ್ಥಿಯೊಬ್ಬ ಮಾದಕ ವಸ್ತುಗಳ ದಾಸನಾಗಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಆಘಾತಕಾರಿ ವಿಚಾರ ಬಯಲಾಗಿದೆ. ಕರ್ನಾಟಕದ ಗಡಿಭಾಗ ಕೇರಳದ ಕಾಸರಗೋಡಿನಲ್ಲಿ ಸ್ಟಿಕ್ಕರ್ ರೂಪದಲ್ಲಿರುವ ಮಾದಕ ವಸ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಮಿಠಾಯಿ, ಮೌತ್ ಸ್ಪ್ರೇ, ಟ್ಯಾಬ್ಲೆಟ್‌ಗಳ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಮಾಫಿಯಾದ ಹೊಸ ಪ್ರಯೋಗವೇ ಇದಾಗಿದ್ದು, ಎಲ್‌ಎಸ್‌ಡಿ ಹೆಸರಿನ  ಮಾದಕವಸ್ತು ಸ್ಟಿಕ್ಕರ್ ರೂಪದಲ್ಲಿ ಮಕ್ಕಳ ಕೈ ಸೇರುತ್ತಿವೆ.

ಮಕ್ಕಳನ್ನು ಆಕರ್ಷಿಸುತ್ತಿರುವ ಕಾರ್ಟೂನ್ ಸ್ಟಿಕ್ಕರ್‌ಗೆ ಎಲ್‌ಎಸ್‌ಡಿ ಬ್ಲಾಟರ್ ಪೇಪರ್ ಅಂಟಿಸಲಾಗಿರುತ್ತದೆ. ಈ ಸ್ಟಿಕ್ಕರನ್ನು ನಾಲಿಗೆಯಲ್ಲಿ ಇಟ್ಟರೆ ಅದರಲ್ಲಿರುವ ಮಾದಕವಸ್ತು ಶರೀರ ಸೇರುತ್ತದೆ. ಇದನ್ನು ಸೇವಿಸಿದ ಬಳಿಕ ಗಂಟೆಗಳ ಕಾಲ ಅಮಲು ಇರುತ್ತದೆ. ಮಾದಕ ವಸ್ತು ಹೆಚ್ಚು ಪ್ರಮಾಣದಲ್ಲಿ ದೇಹ ಸೇರಿದರೆ ಸೇವಿಸಿದವರು ಪ್ರಜ್ಞಾಹೀನ ಸ್ಥಿತಿ ತಲುಪುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಈ ಸ್ಟಿಕ್ಕರ್ ರೂಪದ ಮಾದಕವಸ್ತುವಿನಿಂದ ದೂರ ಇಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಈ ಸ್ಟಿಕ್ಕರ್ ರೂಪದ ಮಾದಕ ವಸ್ತುವಿನ ಬೆನ್ನುಬಿದ್ದಿದ್ದಾರೆ.

೨೦೧೫ ಎಪ್ರಿಲ್‌ನಲ್ಲಿ ನಗರದ ಕದ್ರಿ ಠಾಣಾ ಪೋಲಿಸರು ೧೦ ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿಯನ್ನು ವಶಪಡಿಸಿ ರಾಬಿನ್ ರಾಯ್ ಎಂಬತನನ್ನು ಬಂಧಿಸಿದ್ದರು. ಹೀಗಾಗಿ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೂ ಸುಲಭವಾಗಿ ಗುರುತಿಸಲು ಹಾಗೂ ಪತ್ತೆಹಚ್ಚಲು ಅಸಾಧ್ಯವಾದ ಈ ಮಾದರಿ ಮಾದಕ ವಸ್ತುಗಳು ಈಗಾಗಲೇ ಲಗ್ಗೆಇಟ್ಟಿದೆ ಎಂದು ಹೇಳಲಾಗುತ್ತಿದೆ. ಕಾಸರಗೋಡು ಪೊಲೀಸರು ತನಿಖೆ ಮುಂದುವರಿಸಿದ್ದು ಈಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕರ ಸಭೆ ನಡೆಸಿ ಮಕ್ಕಳನ್ನು ಈ ಕಾರ್ಟೂನ್ ಸ್ಟಿಕ್ಕರ್‌ಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಲಾಗಿದೆ .


loading...

No comments