ಮುಂಬೈಯಿಂದ ಸುಪಾರಿ ಕೊಟ್ಟು ಶರತ್ ಹತ್ಯೆ !
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಬಂಧನ ?
ಮಂಗಳೂರು : ಆರೆಸ್ಸೆಸ್ ಮುಖಂಡ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ದೃಢಪಡಿಸಿಲ್ಲ. ತನಿಖಾತಂಡಕ್ಕೆ ಮಹತ್ವದ ಮಾಹಿತಿ ಲಭಿಸಿದ್ದು ಅದರಂತೆ ಮುಂಬೈ ಮೂಲದ ವ್ಯಕ್ತಿ ಹಂತಕರಿಗೆ ಸುಪಾರಿ ಹಣ ಸಲ್ಲಿಸಿದ್ದು ಸ್ಥಳೀಯರ ಮೂಲಕ ಶರತ್ ಚಲನವಲನಗಳ ಮೇಲೆ ನಿಗಾ ಇರಿಸಿ ಹತ್ಯೆಗೈಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ.
ಬಿಸಿರೋಡ್ ಫ್ಲೈ ಓವರ್ ಪಕ್ಕದಲ್ಲಿ `ಉದಯ ಲಾಂಡ್ರಿ’ ನಡೆಸುತ್ತಿದ್ದ ಶರತ್ ಮಡಿವಾಳ ಅಂಗಡಿ ಬಂದ್ ಮಾಡುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಂಗಡಿಯೊಳಕ್ಕೆ ಹೊಕ್ಕು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಪಕ್ಕದ ಅಂಗಡಿಯಾತ ಶರತ್‌ರನ್ನು ರಕ್ಷಿಸಲು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶರತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ನಡೆದ ಶವಯಾತ್ರೆಯಲ್ಲಿ ಕಲ್ಲುತೂರಾಟ ನಡೆದು ಐವರು ಹಿಂದೂ ಮುಖಂಡ ಮೇಲೆ ಕೇಸ್ ಕೂಡಾ ದಾಖಲಾಗಿತ್ತು. ಪ್ರಕರಣ ನಡೆದು ತಿಂಗಳು ಉರುಳಿದರೂ ಆರೋಪಿಗಳ ಪತ್ತೆಕಾರ್ಯ ಆಗಿರಲಿಲ್ಲ.
ತನಿಖಾತಂಡ ಕಾಸರಗೋಡು, ಮುಂಬೈಯನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಿದ್ದು ಇದೀಗ ಆರೋಪಿಗಳ ಸುಳಿವು ಲಭಿಸಿದ್ದು ಅದರಂತೆ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ. ಶರತ್ ಹತ್ಯಾ ಪ್ರಕರಣದ ಆರೋಪಿಗಳು ಮುಂಬೈನಲ್ಲಿ ತಲೆಮರೆಸಿದ್ದಾರೆ ಎಂಬ ಮಾಹಿತಿಯ ಅನ್ವಯ ಸಿಸಿಬಿ ಪೊಲೀಸ್ ತಂಡವು ಮುಂಬೈಗೆ ತೆರಳಿತ್ತು. ಇದೀಗ ಪೊಲೀಸರು ಮುಂಬೈನಿಂದ ವಾಪಸಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
loading...
No comments