Breaking News

ಮೇಯರ್‌ ಸದಸ್ಯತ್ವವನ್ನೇ ರದ್ದು ಮಾಡಿದ ಹೈಕೋರ್ಟ್‌

 ಮೈಸೂರು ಮಹಾನಗರ ಪಾಲಿಕೆ ಮೇಯರ್‌ ರುಕ್ಮಿಣಿ ಮಾದೇಗೌಡ 2018ರಲ್ಲಿ ನಡೆದ ಚುನಾವಣೆ ವೇಳೆ ಆದಾಯ ಮುಚ್ಚಿಟ್ಟ ಪ್ರಕರಣದಲ್ಲಿ ಇದೀಗ ಅವರ ಸದಸ್ಯತ್ವವನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ವಾರ್ಡ್‌ನಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ಸೂಚಿಸಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ ತೀವ್ರ ಮುಜುಗರಕ್ಕೀಡಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರು. ಆದರೆ, ಮೇಯರ್‌ ಪದವಿಗೆ ಏರಿದ ಕೆಲವೇ ತಿಂಗಳಿನಲ್ಲಿ ಅವರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪರಾಜಿತ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಸಲ್ಲಿಸಿದ ತಕರಾರನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಮೂರು ವರ್ಷಗಳ ಹಿಂದೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಆಗ ಜೆಡಿಎಸ್‌ನಿಂದ ರುಕ್ಮಿಣಿ ಮಾದೇಗೌಡ ವಾರ್ಡ್‌ ನಂ. 36 ರಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಆದರೆ, ಪರಾಜಿತ ಅಭ್ಯರ್ಥಿ ರಜನಿ ಅಣ್ಣಯ್ಯ ಇವರ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರು.

ಬಿಸಿಎಂ(ಬಿ)ಗೆ ನಿಗದಿಯಾಗಿದ್ದ 36ನೇ ವಾಡ್‌ನಲ್ಲಿ ತೆರಿಗೆ ಪಾವತಿದಾರರಾಗಿರುವ ರುಕ್ಮಿಣಿ ಮಾದೇಗೌಡ ಸ್ಪರ್ಧಿಸಿದ್ದರು. ಪತಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡ ಅವರ ಆಸ್ತಿಯನ್ನು ಘೋಷಣೆ ಮಾಡಿರಲಿಲ್ಲ. ಇದಕ್ಕೆ ತಕರಾರು ತೆಗೆದು ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ರಜನಿ ಕೋರಿದ್ದರು. ಸ್ಥಳೀಯ ನ್ಯಾಯಾಲಯದಲ್ಲಿ ಮೊದಲು ರುಕ್ಮಿಣಿ ಅವರ ಪರ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದಾಗ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಸೂಚಿಸಲಾಯಿತು. ಜಿಲ್ಲಾ ನ್ಯಾಯಾಲಯದಲ್ಲಿ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದುಗೊಳಿಸಿ ರಜನಿ ಅವರನ್ನು ವಿಜಯಿ ಎಂದು ಘೋಷಿಸುವಂತೆ ತೀರ್ಪು ನೀಡಲಾಯಿತು.

ಇದರ ವಿರುದ್ಧ ಹೈಕೋರ್ಟ್‌ ಮೆಟ್ಟಲೇರಿದ ರುಕ್ಮಿಣಿ ಮಾದೇಗೌಡ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತಂದಿದ್ದರು. ಮೇಯರ್‌ ಆಗಿ ಆಯ್ಕೆಯಾದ ದಿನವೇ ಇದರ ವಿಚಾರಣೆ ಇತ್ತಾದರೂ ಮುಂದೂಡಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು, ಕೇವಲ ಮೇಯರ್‌ ಸ್ಥಾನ ಮಾತ್ರವಲ್ಲದೆ, ಪಾಲಿಕೆ ಸದಸ್ಯತ್ವಕ್ಕೂ ಕುತ್ತು ಬಂದಿದೆ.


via vijaya karnataka


No comments