Breaking News

ವಿಶ್ವದ ಪ್ರಪ್ರಥಮ ಚಾಲಕ ರಹಿತ, ಸ್ವಯಂಚಾಲಿತ ಟ್ಯಾಕ್ಸಿ ಸೇವೆ

ಸಿಂಗಾಪುರ, ಆ.26: ವಿಶ್ವದ ಪ್ರಪ್ರಥಮ ಚಾಲಕ ರಹಿತ, ಸ್ವಯಂಚಾಲಿತ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಎಂದು ಇಲ್ಲಿನ ಸ್ವಾಯತ್ತ ವಾಹನ ಸಾಫ್ಟ್ವೇರ್ ಕಂಪೆನಿಯಾದ ನ್ಯೂಟೊನೊಮಿ ಗುರುವಾರ ಪ್ರಕಟಿಸಿದೆ. ಈ ಮೂಲಕ ಈ ಹೊಸ ಕಂಪೆನಿ ಉಬೇರ್ನ ಉದ್ದೇಶಿತ ರೈಡ್ಹೈಲಿಂಗ್ ಸೇವೆಯನ್ನು ಹಿಂದಿಕ್ಕಿದೆ. ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕೆಲವೇ ವಾರಗಳಲ್ಲಿ ಸ್ವಯಂಚಾಲಿತ ಕಾರು ಸೇವೆ ಆರಂಭಿಸುವುದಾಗಿ ಉಬೇರ್ ಪ್ರಕಟಿಸಿತ್ತು. ಆಯ್ದ ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್ಗಳ ಮೂಲಕ ಈ ಸೇವೆಯನ್ನು ಉಚಿತವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಕಂಪೆನಿ ಪ್ರಕಟಿಸಿದೆ. ಹಲವು ವರ್ಷಗಳಿಂದ ಗೂಗಲ್ ಹಾಗೂ ವೋಲ್ವೊ ಕಂಪೆನಿಗಳು ಚಾಲಕರಹಿತ ಸ್ವಯಂಚಾಲಿತ ಕಾರು ಪರಿಕಲ್ಪನೆ ಬಗ್ಗೆ ಪರೀಕ್ಷೆ ನಡೆಸುತ್ತಿದ್ದವು. ಇದೀಗ ಸಿಂಗಾಪುರ ಮೂಲದ ಕಂಪೆನಿ ಇಂಥ ಆರು ಕಾರುಗಳೊಂದಿಗೆ ವಿನೂತನ ಸೇವೆ ಆರಂಭಿಸಿದೆ.

ಈ ವರ್ಷದ ಅಂತ್ಯದ ಒಳಗಾಗಿ ಇಂಥ 12 ಕಾರುಗಳು ರಸ್ತೆಗೆ ಇಳಿಯಲಿವೆ ಎಂದು ಕಂಪೆನಿ ಪ್ರಕಟಿಸಿದೆ.  ಗಾರ್ಡಿಯನ್ ವರದಿಯ ಪ್ರಕಾರ, ಈ ಕಾರುಗಳು ಚಕ್ರದಲ್ಲಿ ಸುರಕ್ಷಾ ಚಾಲನಾ ವ್ಯವಸ್ಥೆ ಹೊಂದಿರುತ್ತವೆ ಎಂದು ಕಂಪೆನಿಯ ಸಿಇಓ ಕಾರ್ಲ್ ಇಯೆಂಗಮ್ಮಾ ಹೇಳಿದ್ದಾರೆ. ಈ ಪೈಲಟ್ ಎಲ್ಲ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಲು ನಮಗೆ ಅವಕಾಶ ಮಾಡಿಕೊಡುತ್ತಾನೆ. ಇದರ ಜತೆಗೆ ಪ್ರಯಾಣಿಕರು ಈ ಚಾಲಕರಹಿತ ಸೇವೆಯನ್ನು ಎಷ್ಟರ ಮಟ್ಟಿಗೆ ಆಸ್ವಾದಿಸುತ್ತಿದ್ದಾರೆ ಎಂದು ಕಂಡುಹಿಡಿಯುವ ವ್ಯವಸ್ಥೆಯೂ ಇರುತ್ತದೆ.

ಇದು ರೆನಾಲ್ಟ್ ಝೋಯೆ ಹಾಗೂ ಮಿತ್ಸುಬಿಷಿ ಐ-ಎಂಐಇವಿ ಎಲೆಕ್ಟ್ರಾನಿಕ್ ಕಾರುಗಳ ಸುಧಾರಿತ ರೂಪವಾಗಿದ್ದು, ಇದರ ಕಾರ್ಯನಿರ್ವಹಣೆಯ ಮೇಲೆ ನಿಗಾ ಇರಿಸುವ ಸಂಶೋಧಕ ಹಿಂದಿನ ಸೀಟಿನಲ್ಲಿ ಇರುತ್ತಾರೆ. ಕಾರಿನಲ್ಲಿ ಲೈಡರ್ ಎಂಬ ಪತ್ತೆ ವ್ಯವಸ್ಥೆಯೂ ಇದ್ದು, ಇದು ಲೇಸರ್ ಸಹಾಯದಿಂದ ರಾಡಾರ್ನಂತೆ ಕಾರ್ಯನಿರ್ವಹಿಸುತ್ತದೆ. ಡ್ಯಾಷ್ಬೋರ್ಡ್ನಲ್ಲಿರುವ ಎರಡು ಕ್ಯಾಮೆರಾಗಳು ಮುಂದಿರುವ ತಡೆ ಹಾಗೂ ಟ್ರಾಫಿಕ್ ಸಿಗ್ನಲ್ಗಳನ್ನು ಗುರುತಿಸುತ್ತವೆ. ಈ ಸೇವೆ ವಾಹನದಟ್ಟಣೆ ತಡೆಯಲು ಸಹಕಾರಿಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

No comments