Breaking News

ಪೌರ ಕಾರ್ಮಿಕರಿಗೆ ಸಲಾಂ


ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಸ್ವಚ್ಛತೆಗೆ ಸದಾ ಆದ್ಯತೆ ನೀಡುತ್ತಿದ್ದರು. ಅವರ ವಿಚಾರಧಾರೆಗಳೊಂದಿಗೆ ನಮ್ಮ ಸುತ್ತಮುತ್ತಲ ಪರಿಸರ, ಮನೆಯಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಾವೆಲ್ಲ ನಮನ ಸಲ್ಲಿಸಬಹುದಾಗಿದೆ.ಕಳೆದ ವರ್ಷ ಅಕ್ಟೋಬರ್ 2 ಗಾಂಧಿ ಜಯಂತಿ ನಿಮಿತ್ತ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಇದಕ್ಕೆ ದೇಶಾದ್ಯಂತ ಸೆಲೆಬ್ರಿಟಿಗಳು ಶಾಲೆ, ಕಾಲೇಜು, ಸಂಘ-ಸಂಸ್ಥೆಗಳು, ಕ್ರೀಡಾಪಟುಗಳು, ಸರ್ಕಾರಿ ಮತ್ತು ಸರ್ಕಾರೇತರ ಎಲ್ಲಾ ವಿಭಾಗಗಳಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿತು.

ಇವತ್ತಿಗೂ ಎಲ್ಲಾ ಕಡೆ ಸ್ವಚ್ಛ ಭಾರತ ಅಭಿಯಾನಗಳು ನಿರಂತರವಾಗಿ ನಡೆಯುತ್ತಲೆ ಇವೆ. ಆದರೆ, ಈ ಅಭಿಯಾನದ ಹಿಂದೆ ನಮಗೆಲ್ಲರಿಗೂ ಗೊತ್ತೋ ಗೊತ್ತಿಲ್ಲದ ಹಾಗೆ ಅದೆಷ್ಟೋ ಸತ್ಯಗಳು ಬೆಳಕಿಗೆ ಬರಬೇಕಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದೆ ಈ ಯೋಜನೆ ಜಾರಿಗೆ ತರಲು ಕಾರಣ, ಮಹಾತ್ಮ ಗಾಂಧೀಜಿಯವರು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸ್ವಚ್ಛತೆಗೆ ನೀಡಿದ ಮಹತ್ವ ಬಹಳ ದೊಡ್ಡದು ಎಂದರೆ ತಪ್ಪಾಗಲಾರದು. ಗಾಂಧೀಜಿಯವರು ಆಫ್ರಿಕಾದಲ್ಲಿದ್ದಾಗ ತಮ್ಮ ಧರ್ಮಪತ್ನಿ ಕಸ್ತೂರ ಬಾರವರಿಗೆ ಸಾರ್ವಜನಿಕ ಶೌಚಾಲಯ ತೊಳೆಯಲು ಹೇಳಿದರು ಅದಕ್ಕೆ ಕಸ್ತೂರ ಬಾರವರು ನಿರಾಕರಿಸಿದಾಗ ಅವರನ್ನು ಗಾಂಧೀಜಿಯವರು ಮನೆಯಿಂದ ಹೊರಗೆ ಹಾಕಿದ ಘಟನೆ ಮತ್ತು ಶೌಚಾಲಯವನ್ನು ತೊಳೆದ ನಂತರವೆ ಅವರನ್ನು ಒಳಗಡೆ ಕರೆದುಕೊಂಡ ವಿಷಯವನ್ನು ಗಾಂಧೀಜಿಯವರ ಆತ್ಮ ಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸಪಿರಿಮೆಂಟ್ಸ್ ವಿಥ್ ಟ್ರೂತ್‍ರಲ್ಲಿ ಗಮನಿಸಬಹುದಾಗಿದೆ.

ಗಾಂಧೀಜಿ, ಅಬ್ದುಲ್ ಕಲಾಂ, ದಾದಾಬಾಯಿ ನವರೋಜಿರವರಂತ ಮೇಧಾವಿ ವ್ಯಕ್ತಿಗಳು ಎಲ್ಲರೂ ತಮ್ಮ ಜೀವನದಲ್ಲಿ ಸ್ವಚ್ಛತೆ ಮತ್ತು ಉತ್ತಮ ಪರಿಸರಕ್ಕಾಗಿ ಹಂಬಲಿಸಿದವರು.ಅದಕ್ಕಾಗಿ ನರೇಂದ್ರ ಮೋದಿಯವರುಗಾಂಧೀಜಿಯವರ ಸ್ವಚ್ಛತೆಯ ಬಗೆಗಿನ ಅರಿವು ಮೂಡಿಸಲು ಮತ್ತು ಅದನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಲು ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೆ ತಂದರು.ಈ ಯೋಜನೆಯಲ್ಲಿ ನಮಾಮಿ ಗಂಗೆ ಅಂದರೆ ಗಂಗಾ ನದಿಯ ಶುದ್ಧೀಕರಣವಿರಬಹುದು ಅಥವಾ ನಮ್ಮ ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಿರಬಹುದು,. ನಮ್ಮ ಮನೆ ನೆರೆಹೊರೆಯ ಸ್ಥಳಗಳಲ್ಲಿ ಈ ಕಾರ್ಯಕ್ರಮದ ಮೂಲಕ ಸ್ವಚ್ಛತೆಗೆ ಮುಖ್ಯ ಆದ್ಯತೆ ಕೊಡಲಾಯಿತು. ಅದೇನೇ ಇರಲಿ ಆದರೆ ಈ ಕಾರ್ಯಕ್ರಮ ಇವತ್ತು ಬರಿ ಕೈಯಲ್ಲಿ ಕಸಬರಿಗೆ ಹಿಡಿದು ಫೋಟೋ  ಕ್ಲಿಕ್ಕಿಸಿ, ಸೆಲ್ಫಿ ತೆಗೆದು ಕೊಂಡು ಶೋಕಿ ನೀಡುವ ಕಾರ್ಯಕ್ರಮವಾಗಿ ಬಿಟ್ಟಿದೆ.

ಬಹಳಷ್ಟು ಜನ ಬೇರೆ ಕಡೆಯಿಂದ ಕಸವನ್ನು ತಂದು ಹಾಕಿ ಅದನ್ನು ಗುಡಿಸುತ್ತಿರುವ ರೀತಿ ತೋರಿಸುವಂತಹ ಅನೇಕ ಚಿತ್ರಣಗಳನ್ನು ನಾವು ನೋಡಿದ್ದೇವೆ. ಆದರೆ, ಈ ದೇಶದಲ್ಲಿ ನಿಜವಾಗಿಯೂ ಈ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾಣದ ಕೈಗಳ ಪರಿಚಯ ನಮಗಾಗಬೇಕಾಗಿದೆ. ಈ ಸ್ವಚ್ಛ ಭಾರತದ ನಿಜವಾದ ರೂವಾರಿಗಳು ನಮ್ಮ ಹೆಮ್ಮೆಯ ಪೌರಕಾರ್ಮಿಕರಿಗೆ ಈ ಶ್ರೇಯಸ್ಸು ಸಲ್ಲಬೇಕು.ಸ್ವಚ್ಛ ಭಾರತ, ಸದೃಢ ಭಾರತ, ಸಶಕ್ತ ಭಾರತ ಅಂದರೆ, ಆರೋಗ್ಯಯುತ ವಾತಾವರಣದಿಂದ ಸದೃಢ ದೇಶ ಕಟ್ಟಬಹುದು ಎನ್ನುವ ತಾತ್ಪರ್ಯದ ಯೋಜನೆಯಾಗಿದೆ. ದಿನ ಬೆಳಗಾದರೆ ಇನ್ನೂ ಮಂಜು ಕವಿದ ವಾತಾವರಣ, ಚುಮು ಚುಮು ಚಳಿ, ಮಳೆಯಿದ್ದರೂ ಎಂದಿನಂತೆ ಸೂರ್ಯ ಉದಯಿಸುವ ಮುನ್ನ ಪ್ರಾತಃಕಾಲದಲ್ಲಿ ತಮ್ಮ ಮಕ್ಕಳು-ಮರಿಗಳನ್ನು ಬಿಟ್ಟು ನಗರದ ಹಾದಿ-ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಮನುಷ್ಯ ಶಹರಗಳಲ್ಲಿ ತನಗರಿವಿಲ್ಲದಂತೆಯೇ ಎಷ್ಟೋ ಹೊಲಸನ್ನು ಮಾಡಿರುತ್ತಾನೆ.

ಆದರೆ, ಅವನು ಎದ್ದು ಶಾಲೆ, ಕಾಲೇಜು, ಆಫೀಸ್ ಹೀಗೆ ತಮ್ಮ ದೈನಂದಿನ ಕೆಲಸವನ್ನು ಆರಂಭಿಸುವಷ್ಟರಲ್ಲಿ ಚೊಕ್ಕವಾಗಿ ಗುಡಿಸಿ, ಸ್ವಚ್ಛ ಸುಂದರ ವಾತಾವರಣವನ್ನು ನಿರ್ಮಾಣ ಮಾಡಿಬಿಡುತ್ತಾರೆ. ಸಾಮಾನ್ಯ ಮನುಷ್ಯ ಕಣ್ಣಿಂದ ನೋಡಲು ಅಸಹ್ಯ ಪಡುವಂತಹದ್ದನ್ನು ಅವರು ತಮ್ಮ ಕೈಯಿಂದ ಸ್ವಚ್ಛಗೊಳಿಸುವುದು ಅವರಲ್ಲಿರುವ ದೊಡ್ಡ ಮನಸ್ಸೆಂದರೆ ತಪ್ಪಾಗಲಾರದು. ಸಂಬಳಕ್ಕೋಸ್ಕರ ಅವರು ಕೆಲಸ ಮಾಡುತ್ತಿರಬಹುದು. ಆದರೆ, ಅದೇ ರೀತಿ ಸಮಾಜದಲ್ಲಿ ಮಾಡಲು ಹಲವಾರು ಕೆಲಸಗಳಿರು ತ್ತವೆ. ಅವೆಲ್ಲವನ್ನು ಬಿಟ್ಟು ಸ್ವಚ್ಛತೆಯೆ ನಮ್ಮ ಕರ್ತವ್ಯವೆಂದು ದೇಶ ಸೇವೆಯ ಒಂದು ಅತ್ಯುನ್ನತ ಕೆಲಸದಲ್ಲಿ ತೊಡಗಿಕೊಳ್ಳುವ ಅವರುಗಳೆ ನಿಜವಾದ ಸ್ವಚ್ಛ ಭಾರತ ಅಭಿಯಾನದ ಸನ್ಮಾನಕ್ಕೆ ಅರ್ಹರಿರುವರು. ಆದರೆ, ಅವರ ಬಗ್ಗೆ ಯಾರಿಗೂ ಕಾಳಜಿ, ಆಲೋಚನೆಯೇ ಇಲ್ಲ. ಇದು ನಿಜಕ್ಕೂ ದುರ್ದೈವದ ಸಂಗತಿ.

ವೋಟಿಗಾಗಿ ನೋಟು ಎಂಬ ಪ್ರತಿ ಐದು ವರ್ಷಕ್ಕೆ ಬರುವ ಒಂದು ಯೋಜನೆಯ ಮೂಲಕ ಅವರಿಗೆ ಆಸೆ-ಆಶ್ವಾಸನೆಗಳನ್ನು ನೀಡಿ ಅವರನ್ನು ಕಡೆಗಣಿಸುತ್ತ ಬಂದಿರುವುದು ಹಲವಾರು ವರ್ಷಗಳಿಂದ ನಡೆಯುತ್ತಲೆ ಬಂದಿದೆ.ಅವರಿಗೂ ನಮ್ಮ ತರಹ ಜೀವನವಿದೆ, ಸಂಸಾರವಿದೆ ಎಂಬುದು ನಮ್ಮೆಲ್ಲರಿಗೂ ಅರಿವಿರುವ ಮಾತು. ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುವುದರೊಳಗೆ ಬೆಳಗ್ಗೆ 10 ರಿಂದ 11 ಗಂಟೆಯಾಗಿರುತ್ತದೆ.ಆದರೆ, ಅವರ ಮಕ್ಕಳು ಸ್ನಾನ, ತಿಂಡಿ, ಶಾಲೆ, ಅವರವರ ಗಂಡ-ಹೆಂಡತಿ, ತಂದೆ-ತಾಯಿಗಳ ಮುಂಜಾನೆಯ ಕಾರ್ಯಗಳನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆಂಬುದುನಮಗರಿಯದ ಮಾತು. ಇಂತಹ ಮಹಾ ಕೆಲಸ ಮಾಡುವ ಸೇವಕರಿಗೆ ನಮ್ಮ ಸರ್ಕಾರಗಳು ಏನಾದರೂ ಹೊಸ ಯೋಜನೆಗಳನ್ನು ಕೊಡಬೇಕಾಗಿದೆ.

ಮೊನ್ನೆ ಪ್ರಧಾನಿ ನಮ್ಮ ಸೈನಿಕರ ಏಳಿಗೆಗಾಗಿ ಮತ್ತು ಅಭಿವೃದ್ಧಿಗಾಗಿ ಒಂದು ಹೊಸ ಬ್ಯಾಂಕ್ ಅಕೌಂಟ್ ತೆಗೆದು ಧನ ಸಹಾಯ ಕೋರಿದರು. ಅದೇ ರೀತಿ ಪೌರಕಾರ್ಮಿಕರಿಗೂ ಸಹ ವಿಶೇಷ ಸೂಕ್ತ ಬ್ಯಾಂಕ್, ವಿಮಾ, ಆರೋಗ್ಯ, ಪಿಂಚಣಿ ಹೀಗೆ ಹಲವಾರು ಪ್ರೊ ತ್ಸಾಹ ನೀಡುವಂತಹ ಉಚಿತ ಸೇವೆಗಳನ್ನು ನೀಡಬೇಕಿದೆ ಅಥವಾ ಅವರ ಮಕ್ಕಳಿಗೆ ಜೀವನಕ್ಕೆ ಉಪಯೋಗವಾಗುವಂತಹ ಸಣ್ಣ-ಸಣ್ಣ ಯೋಜನೆಗಳನ್ನು ನೀಡಿದರೆ ಅವರ ಮಕ್ಕಳು ಕೂಡ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಇಂತಹ ಕೆಲಸದ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಸಮಸ್ತ ಪೌರ ಕಾರ್ಮಿಕರಿಗೆ ಬೆಂಬಲ ನೀಡಿದರೆ ರಾಷ್ಟ್ರಪಿತರಿಗೆ ಸಲ್ಲಿಸುವ ಗೌರವವಾಗುತ್ತದೆ.

ಸ್ವಚ್ಛ ಭಾರತದ ನಿಜವಾದ ರೂವಾರಿಗಳು ನಮ್ಮ ಹೆಮ್ಮೆಯ ಪೌರಕಾರ್ಮಿಕರಿಗೆ ಈ ಶ್ರೇಯಸ್ಸು ಸಲ್ಲಬೇಕು. ಸ್ವಚ್ಛ ಭಾರತ, ಸದೃಢ ಭಾರತ, ಸಶಕ್ತ ಭಾರತ ಅಂದರೆ, ಆರೋಗ್ಯಯುತ ವಾತಾವರಣದಿಂದ ಸದೃಢ ದೇಶ ಕಟ್ಟಬಹುದು ಎನ್ನುವ ತಾತ್ಪರ್ಯದ ಯೋಜನೆಯಾಗಿದೆ

No comments