Breaking News

ಎತ್ತಿನಹೊಳೆ ಯೋಜನೆಯ ಗುತ್ತಿಗೆ ಕಂಪನಿ ಮೇಲೆ ಐಟಿ ದುಡ್ಡು, ಕೋಟಿ ಕೋಟಿ ಲಂಚ ನೀಡಿರುವುದು ಪತ್ತೆ.

ಬೆಂಗಳೂರು : ರಾಜ್ಯ ಸರ್ಕಾರ ಕರಾವಳಿ ಜನರ ವಿರೋಧದ ನಡುವೆಯೂ ನಡೆಸುತ್ತಿರುವ ಬಹುದೊಡ್ಡ ಎತ್ತಿನಹೊಳೆ (ನೇತ್ರಾವತಿ ನದಿ ತಿರುವು) ಯೋಜನೆಯ ಗುತ್ತಿಗೆ ಪಡೆದಿರೋ ಆಂದ್ರ ಮೂಲದ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಯೋಜನೆ ಸಂಬಂಧ ಕರೆದಿದ್ದ ಟೆಂಡರ್ ಅನ್ನು ಆಂದ್ರ ಮೂಲದ ಗುತ್ತಿಗೆ ಕಂಪನಿ 448 ಕೋಟಿಗೆ ಪಡೆದುಕೊಂಡಿತ್ತು. ಐಟಿ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಕಂಪನಿ ಮೂವರು ಸಚಿವರಿಗೆ ಕೋಟಿ ಕೋಟಿ ಹಣ ಲಂಚವಾಗಿ ನೀಡಿರುವುದು ಪತ್ತೆಯಾಗಿದೆ.ಜೊತೆಗೆ ಕಂಪನಿ 200 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆಸಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಡಾಲರ್ಸ್ ಕಾಲೊನಿ ಸೇರಿ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ 
ಏನಿದು ಎತ್ತಿನಹೊಳೆ ಯೋಜನೆ..?
ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು. ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು. ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ.ಕರ್ನಾಟಕ ಸರಕಾರ "ನೇತ್ರಾವತಿ /ನೇತ್ರಾವತಿ ನದಿತಿರುವು ಯೋಜನೆ"ಗೆ "ಎತ್ತಿನಹೊಳೆ ಯೋಜನೆ" ಎಂಬ ಹೆಸರಿನಲ್ಲಿ ಅಡಿಪಾಯ ಹಾಕಿದೆ. "ಕುಡಿಯುವ ನೀರಿನ ಯೋಜನೆ" ಎಂಬ ಹೆಸರಿನಲ್ಲಿ ಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಪಾರಾಗಿ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವಹಿಸಲಾಗಿದೆ. (ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ). ಕನೀನಿನಿ ಈ ಯೋಜನೆಯ ಸಾಧ್ಯತಾ ವರದಿಯನ್ನು ಇ. ಐ. ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯಿಂದ ಮಾಡಿಸಿದೆ.ಈಗಾಗಲೇ ಜೆಸಿಬಿ ಯಂತ್ರಗಳಿಂದ ದೊಡ್ಡ ದೊಡ್ಡ ಹೊಂಡಗಳನ್ನೇ ಮಾಡಲಾಗಿದ್ದು, ಈ ಹೊಂಡಕ್ಕೆ ಬಿದ್ದ ಕಾಡಾನೆ ಮೊದಲ ಬಲಿಯಾಗಿದೆ. ಈ ಯೋಜನೆಗೆ ಕಸ್ತೂರಿ ರಂಗನ್ ವರದಿ ಅಡ್ಡಿ ಬರುವುದಿಲ್ಲವೆ? ಎಂಬ ಪ್ರಶ್ನೆ ಇದೆ.
ಎತ್ತಿನ ಹೊಳೆ ಯೋಜನೆಗೆ ಸರ್ಕಾರದ ವಿವರ :
ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ : ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಪ್ರದೇಶಗಳಿಗೆ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ) ಪೂರೈಸಲು ನಿರ್ಧರಿಸಲಾಗಿದೆ.
ಯೋಜನೆಯ ವಿವರಗಳು
ಈ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ 4, ಕಾಡುಮನೆಹೊಳೆಗೆ 2, ಕೇರಿಹೊಳೆಗೆ 1, ಹೊಂಗಡಹಳ್ಳಕ್ಕೆ 1, ಒಟ್ಟು 8 ಬ್ಯಾರೇಜ್‌ಗಳನ್ನು ನಿರ್ಮಿಸಲಾಗುವುದು. ಈ ಬ್ಯಾರೇಜ್‌ಗಳಿಂದ ಎತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನವಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಹೂತು ಹಾಕಲಾಗುವ ಪೈಪ್‌ಗಳ ಮುಖಾಂತರ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುವುದು.ಸುಮಾರು 274 ಕಿ.ಮೀ. ಉದ್ದದ (ಗುರುತ್ವ) ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ ರೂ 12912.36 ಕೋಟಿ ವೆಚ್ಚವಾಗಲಿದೆ.ಈ ಯೋಜನೆಯ ಏತಕಾಮಗಾರಿಗಳಿಗೆ ಮೊದಲನೆ ಹಂತವಾಗಿ ಒಟ್ಟು 235.65 ಹೆಕ್ಟೇರ್ ಭೂಮಿ ಅವಶ್ಯವಿದೆ. ಎರಡನೇ ಹಂತದ ಕಾಮಗಾರಿಗೆ 4900 ಹೆಕ್ಟೇರ್ ಭೂಮಿ ಅವಶ್ಯವಿದೆ. ಯೋಜನೆಯಿಂದ ಸುಮಾರು 68.35ಲಕ್ಷ ಜನ ಪ್ರಯೋಜನ ಪಡೆಯಲಿದ್ದಾರೆ. ಏತ ಕಾಮಗಾರಿಗೆ ಒಟ್ಟು 274.86 ಮೆಗಾ ವ್ಯಾಟ್ ವಿದ್ಯುತ್ತಿನ ಅವಶ್ಯವಿದೆ.

No comments