ಆಮ್ ಆದ್ಮೀ ಪಕ್ಷಕ್ಕೆ ದಾನವಾಗಿ ನೀಡಿದ್ದ ಹಣ ವಾಪಾಸ್ ಕೇಳಿದ NRI ವೈದ್ಯ.
ದೆಹಲಿ : ಅರವಿಂದ್ ಕೇಜ್ರಿವಾಲ್ ರ ಆಮ್ ಆದ್ಮೀ ಪಕ್ಷಕ್ಕೆ ಹಣವನ್ನು ದಾನವಾಗಿ ನೀಡಿದ್ದ ಅಮೇರಿಕಾದಲ್ಲಿ ನೆಲೆಸಿರುವ ಭಾರತದ ವೈದ್ಯರೊಬ್ಬರು ತಾನು ದಾನವಾಗಿ ನೀಡಿದ್ದ ಹಣ ವಾಪಾಸ್ ಮಾಡುವಂತೆ ಕೇಜ್ರಿವಾಲ್ ಗೆ ಪತ್ರ ಬರೆದಿದ್ದಾರೆ.
ಡಾಕ್ಟರ್ ಮುನೀಶ್ ರಾಯ್ಜಾದ ಶಿಕಾಗೋದಲ್ಲಿ ವಾಸಿಸುತ್ತಿದ್ದು ಅಮೇರಿಕಾದಲ್ಲಿ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಭಾರತದಲ್ಲಿ ಆಮ್ ಆದ್ಮೀ ಪಕ್ಷ ಸ್ಥಾಪನೆಯಾದಾಗ ಡಾಕ್ಟರ್ ರಾಯ್ಜಾದ ಅಮೇರಿಕಾದಲ್ಲಿ ಆಮ್ ಆದ್ಮೀ ಪಕ್ಷದ NRI ವಿಂಗ್ ಸ್ಥಾಪಿಸಿದ್ದರು.
ಕಳೆದ ವರ್ಷ ನವೆಂಬರ್ ನಲ್ಲಿ ಡಾಕ್ಟರ್ ತಮ್ಮ ವೆಬ್ ಸೈಟ್ ನಲ್ಲಿ ಲಾಲೂ ಪ್ರಸಾದ್ ಬಗ್ಗೆ ಲೇಖನ ಬರೆದಿದ್ದರು. ಇದು ಪಕ್ಷದ ನಿಯಮಗಳಿಗೆ ವಿರುದ್ದವೆಂಬ ಕಾರಣಕ್ಕೆ ಅವರನ್ನು ಅರವಿಂದ್ ಕೇಜ್ರಿವಾಲ್ ಆಮ್ ಆದ್ಮೀ ಪಕ್ಷದಿಂದ ತೆಗೆದುಹಾಕಿದ್ದರು. ರಾಯ್ಜಾದ ಅವರು ಈ ಕ್ರಮದಿಂದ ಕೋಪಗೊಂಡಿದ್ದರು.
ಹಿಂದೆ ಆಮ್ ಆದ್ಮೀ ಪಕ್ಷ ತನ್ನ ಖರ್ಚು ವೆಚ್ಚಗಳ ಸಂಪೂರ್ಣ ವಿವರ ಪಕ್ಷದ ವೆಬ್ ಸೈಟ್ ನಲ್ಲಿ ಹಾಕಲಾಗುತ್ತಿತ್ತು ಆದರೆ ಈ ವರ್ಷದ ಜೂನ್ ನಿಂದ ಅದನ್ನು ವೆಬ್ ಸೈಟ್ ನಿಂದ ತೆಗೆದು ಹಾಕಲಾಗಿದೆ.ಆಮ್ ಆದ್ಮೀ ಪಕ್ಷದ ಕಛೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ವೆಬ್ ಸೈಟ್ ನಲ್ಲಿರುವ ದಾಖಲೆಗಳು ಚುನಾವಣಾ ಆಯೋಗದ ದಾಖಲೆಗಳೊಂದಿಗೆ ತಾಳೆಯಾಗದ ಕಾರಣ ಪಕ್ಷಕ್ಕೆ ಇಲ್ಲಿವರೆಗೆ ಮೂರು ನೋಟೀಸ್ ನೀಡಿದ್ದಾರೆ. ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಅದನ್ನು ವೆಬ್ ಸೈಟ್ ನಿಂದ ತೆರವುಗೊಳಿಸಲಾಗಿದೆ ಎಂಬುದು ರಾಯ್ಜಾದ ಆರೋಪ.
ಆಮ್ ಆದ್ಮೀ ಪಕ್ಷ ಪ್ರಾರಂಭಿಸುವಾಗ ನಾವು ನಿಷ್ಠೆಯಿಂದ ಕೆಲಸ ಮಾಡಲು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪಕ್ಷ ಪ್ರಾರಂಭಿಸುತ್ತಿರುವುದಾಗಿ ಹೇಳಿದವರು ಇಂದು ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ನೋಡಿದರೆ ತುಂಬಾ ಸಂಕಟವಾಗುತ್ತೆ. ನಾವು ನಮ್ಮ ಕೆಲಸ ಕಾರ್ಯ ಬಿಟ್ಟು ಪಕ್ಷಕ್ಕಾಗಿ ದುಡಿದೆವು ಆದರೆ ನಾವೆಲ್ಲ ಮೋಸಹೋದೆವು ಎಂದು ರಾಯ್ಜಾದ ತಮ್ಮ ವೆಬ್ ಸೈಟ್ ನಲ್ಲಿ ಬರೆದಿದ್ದಾರೆ.
No comments