Breaking News

ತಾಯಿಯ ರಕ್ಷಣೆಗೆ ಗುರು ಸೈನ್ಯದ ಸಮರ,





ಡಿಸೆಂಬರ್ 28, ವಿಜಯಪುರ : ಗೋಯಾತ್ರೆ ವಿಜಯಪುರಕ್ಕೆ ಬಂದಿರುವುದು, ಮುಂದಿನ ದಿನಗಳಲ್ಲಿ ಗೋಮಾತೆಯನ್ನು ಪ್ರತಿಮೆಯಾಗಿ ಮಾತ್ರ ಕಾಣಬಾರದು ಎನ್ನುವ ಕಾರಣಕ್ಕಾಗಿ. ವಿಜಯಪುರದ ಹೆಸರಿನ ಬಲದಿಂದ ಗೋಯಾತ್ರೆಗೆ ವಿಜಯವೇ ಆಗಲಿ ಎನ್ನುವ ಆಶಯದಿಂದ ಮಂಗಲಗೋಯಾತ್ರೆ ವಿಜಯಪುರವನ್ನು ಪ್ರವೇಶಿಸಿದೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ವಿಜಯಪುರದ ಶಿವಾನುಭವ ಮಂಟಪದಲ್ಲಿ ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಿತ್ತು ಮಾತನಾಡಿದ ಶ್ರೀಗಳು, ವಿಜಯಪುರ ಗೋಯಾತ್ರೆಯ ಗೋಸಂಗ್ರಾಮಕ್ಕೆ ವಿಜಯವನ್ನು ತರಲಿ. ಗೋಹತ್ಯೆಯ ಘೋರಕೃತ್ಯಕ್ಕೆ ಇತಿಶ್ರೀ ಹಾಡಲೋಸುಗವೇ ಯತಿಶ್ರೀಗಳು ಒಂದಾಗಿದ್ದಾರೆ. ಇದು ತಾಯಿಯ ರಕ್ಷಣೆಗೆ ಗುರುಗಳ ಸೈನ್ಯದ ಸಮರ.
ಗೋವು ಭಾರತದ ಪ್ರಾಣಿಯಲ್ಲ. ಭಾರತದ ಪ್ರಾಣ. ಗೋವು ಭಾರತದ ಶಿವ. ಅಂತಹಾ ಗೋವು ಶವವಾಗಿ ನಮಗೆ ಕಾಣಬಾರದು. ತನ್ನ ಪ್ರಾಣಕ್ಕೆ ಸಂಚಕಾರ ಬಂದಾಗ, ಧರ್ಮರಕ್ಷಣೆಗಾಗಿ, ತಾಯಿಗೆ ತೊಂದರೆಯಾದಾಗ ಸಂತರು ಸಮರಕ್ಕೆ ಸನ್ನದ್ಧರಾಗಬಹುದು. ಈಗ ಅಂತಹಾ ಮೂರೂ ಸಂದರ್ಭಗಳು ಇಂದು  ಎದುರಾಗಿವೆ. ಯಾವ ಮಹಾಪುರುಷರಿಗಿಂತಲೂ ಗೋವು ಶ್ರೇಷ್ಠ. ಪಂಚಗವ್ಯದಿಂದ ದೇಹಶುದ್ಧಿ. ಯಜ್ಞಕ್ಕೆ ಉಪಕಾರಿ. ಯಾವಾತ ಗೋವಿನ ಹಿಂಸೆಯನ್ನು ನೋಡುತ್ತಾ ಸುಮ್ಮನಿರುತ್ತಾನೋ ಆತನ ಬದುಕು ವ್ಯರ್ಥ. ಹಾಗಾಗಿಯೇ ಗೋಸಂಗ್ರಾಮಕ್ಕೆ ಹೊರಟಿರುವುದು ಮಂಗಲಗೋಯಾತ್ರೆ ಎಂದರು.

ತಾಯಿ ತನ್ನ ಮಗುವಿಗೆ ಮಾತ್ರ ಹಾಲುಣಿಸಿದರೆ, ಗೋಮಾತೆ ಎಲ್ಲಾ ಭೇಧಗಳನ್ನು ಮರೆತು ಎಲ್ಲರಿಗೂ ಕ್ಷೀರ ನೀಡಿ ಮಾತೃತ್ವವನ್ನು ಮೆರೆಯುತ್ತಾಳೆ. ಬೇರೆ ಯಾವ ಪ್ರಾಣಿಗಳಲ್ಲೂ ತಾಯಿಯ ಹಾಲಿಗೆ ಸಮನಾದ ಹಾಲಿಲ್ಲ. ಆದರೆ ಗೋಮಾತೆಯ ಕ್ಷೀರ ತಾಯಿಯ ಹಾಲಿಗೆ ಸಮನಾಗಿದೆ. ಅಂದರೆ ಗೋಮಾತೆ ನಿನ್ನ ತಾಯಿ ಎಂದು ಸೃಷ್ಟಿ ಘೋಷಿಸಿರುವ ಪರಿ ಇದು. ಅದಕ್ಕಾಗಿ ಗೋವುಗಳನ್ನು ಕಾಯಬೇಕಾದ ಅವಶ್ಯಕತೆ ಇಂದಿದೆ ಎಂದು ಗೋಸಂದೇಶ ನೀಡಿದರು.

ಶ್ರೀ ಶಾಂತ ಮಲ್ಲಿಕಾರ್ಜುನ ಶಿವಸ್ವಾಮಿಗಳು ಮಾತನಾಡಿ, ಆರೋಗ್ಯ, ಕುಟುಂಬ ದೇಶ ಸಮೃದ್ಧವಾಗಿರಬೇಕಾದರೆ ಗೋವುಗಳು ಸಮೃದ್ಧವಾಗಿರಬೇಕು. ಗೋವಿದ್ದಲ್ಲಿ ಜೀವನ ಅಮೃತಮಯವಾಗುತ್ತದೆ. ಗೋವುಗಳು ಸುಭಿಕ್ಷವಾಗಿರಬೇಕೆಂಬ ಕಾರಣಕ್ಕಾಗಿ ರಾಘವೇಶ್ವರ ಶ್ರೀಗಳು ಅನೇಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಗೋವಿನ ಹಲವು ಉತ್ಪನ್ನಗಳು ನಮಗೆ ನಿತ್ಯ ಉಪಯುಕ್ತವಾಗಿದೆ. ಗೋವಿನ ಬಗ್ಗೆ ಸಂಶೋಧನೆಗಳ ಮೂಲಕ ತಿಳಿದುಬಂದ ವಿಚಾರವೆಂದರೆ, ರೋಗನಿರೋಧಕ ಶಕ್ತಿ ಮಾನವನಲ್ಲಿ ಹೆಚ್ಚುತ್ತದೆ. ಜೀವನದ ಎಲ್ಲಾ ಸಂಪತ್ತು ಆರೋಗ್ಯಕಾಗಿಯೇ ಸಂಪಾದನೆ ಮಾಡುವುದಾದರೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದು ಗೋವು ಸಾಕು ಮತ್ತು ಇದು ಎಲ್ಲರ ಮನೆ ಮನದಲ್ಲಿ ಬರಬೇಕು ಎಂದರು.

ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಅಂದು ಧರ್ಮದ ಅವಶ್ಯಕತೆಗಾಗಿ ಶ್ರೀ ಶಂಕರಾಚಾರ್ಯರು ಅವತರಿಸಿದರು. ಇಂದು ಹಾಗೆಯೇ ಗೋಸಂಸ್ಕತಿಯ ಪುನರುತ್ಥಾನಕ್ಕಾಗಿ ರಾಘವೇಶ್ವರ ಶ್ರೀಗಳು ಉದಿಸಿದ್ದಾರೆ. ಅಂತಹಾ ರಾಘವೇಶ್ವರ ಶ್ರೀಗಳಿಗೆ ನಮ್ಮೆಲ್ಲರ ಸಹಕಾರ ನೀಡಬೇಕಿದೆ ಎಂದರು.

ಶ್ರೀಸೋಮಲಿಂಗಮಹಾರಾಜರು ಮಾತನಾಡಿ, ದೇಸಿ ಗೋವಿನ ಹಾಲು ಕುಡಿದವರು ಸಂಸ್ಕೃತಿಯನ್ನು ಅರಿಯುತ್ತಾನೆ.ಆದರೆ ಪ್ಯಾಕೇಟ್ ಹಾಲು ಕುಡಿದವನು ವಿಕೃತಿಯತ್ತ ಸಾಗುತ್ತಾನೆ. ಹಿಂದೆ ಗೋವನ್ನು ಮನೆ ಮುಂದೆ ಸಾಕುತ್ತಿದ್ದವರು ಇಂದು ನಾಯಿಗಳನ್ನು ಸಾಕುತ್ತಿದ್ದಾರೆ. ಇದನ್ನು ತಡೆದು ಗೋಸಂರಕ್ಷಣೆಗೆ ಮುಂದಿನ ಪೀಳಿಗೆ ಸಿದ್ಧವಾಗಬೇಕಿದೆ‌. ಹಾಗಾಗಿ ನಾವೆಲ್ಲರೂ ಗೋವನ್ನು ಸಾಕುವ ಮನಸ್ಸು ಮಾಡಿದಾಗ ಮಾತ್ರ ಗೋಯಾತ್ರೆ ಉದ್ದೇಶ ಸಫಲವಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ಸಿದ್ಧೇಶ್ವರ ಸ್ವಾಮಿ ಗುಡಿಯವರೆಗೆ ಭವ್ಯ ಶೋಭಾಯಾತ್ರೆ ನೆರವೇರಿತು. ಯುವ ಬ್ರಿಗೇಡ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು‌.
ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀಗೋಪಾಲಮಹಾರಾಜರು, ದತ್ತಪ್ಪಯ್ಯ ಮಹಾಸ್ವಾಮಿಗಳು, ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಗಣ್ಯರಾದ ಬಸವನಗೌಡ ಪಾಟೀಲ್ ಯತ್ನಾಳ, ಸಂ.ಗು.ಸಜ್ಜನ, ಸಂಗನಗೌಡ ಪಾಟೀಲ್, ಅಮಿತ್ ಬಿರಾದಾರ, ಚಿದಾನಂದ ಇಟ್ಟಂಗಿ, ಗುರು ಗಚ್ಚಿನಮಠ, ರಾಘವ ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದರು.

No comments