Breaking News

ಬೆಂಗಳೂರು ಮೂಲದ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ NIA ಅಧಿಕಾರಿಗಳು.

​​​ಹಿಮಾಚಲ ಪ್ರದೇಶ :  ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ಸ್ಥಳೀಯ ಪೋಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ 'ಇಸ್ಲಾಮಿಕ್ ಸ್ಟೇಟ್'(ಐಸಿಸ್) ಉಗ್ರನನ್ನು ಬಂಧಿಸಿದ್ದಾರೆ. ಶಂಕಿತ ಉಗ್ರ ಸಿರಿಯಾ ತೆರಳಲು ತಯಾರಿ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಬಂಧಿತ ಶಂಕಿತ ಉಗ್ರ ಅಬಿದ್ ಖಾನ್ (23) ಬೆಂಗಳೂರು ನಿವಾಸಿಯಾಗಿದ್ದಾನೆ. ಆತನನ್ನು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಬಂಜಾರ್ ಎಂಬಲ್ಲಿನ ಚರ್ಚ್ ಒಂದರಿಂದ ಪೋಲೀಸರು ಬಂಧಿಸಿದ್ದಾರೆ. ಆತ ಕುಲ್ಲುವಿನಲ್ಲಿ ಕಳೆದ ಐದು ತಿಂಗಳಿನಿಂದ ವಾಸವಿದ್ದು,ನಕಲಿ ದಾಖಲೆ ನೀಡಿ ಸಹಾಯಕನಾಗಿ ಕೆಲಸ ಗಿಟ್ಟಿಸಿಕೊಂಡಿದ್ದ.ಬಂಧಿತನಿಂದ ಮೊಬೈಲ್ ಹಾಗೂ ಲಾಪ್ ಟಾಪ್ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 
ಅಬೀದ್ ಐಸಿಸ್ ಉಗ್ರರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಮತ್ತು ಇಂಡೊನೇಷ್ಯಾಕ್ಕೆ ತೆರಳಿ ಅಲ್ಲಿಂದ ಸಿರಿಯಾಗೆ ತೆರಳುವ ಬಗ್ಗೆ ಯೋಜನೆ ಹಾಕಿದ್ದ ಎಂದು ಎಸ್ಪಿ ಪದಮ್ ಚಂದ್ ಹೇಳಿದರು.ಬಂಧಿತ ಈ ಹಿಂದೆ ಶ್ರೀಲಂಕಾಗೆ ತೆರಳಿರುವ ಬಗ್ಗೆ ಮಾಹಿತಿಯೂ ಸಿಕ್ಕಿರುವುದಾಗಿ ಹೇಳಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ ಕಳೆದ ತಿಂಗಳು ದೆಹಲಿಯಲ್ಲಿ ಅನೇಕ ಕಡೆ ದಾಳಿ ನಡೆಸಿ ಹಲವು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಶಂಕಿತರು ಅಬೀದ್ ಅವರೊಂದಿಗೆ ಸಂಪರ್ಕದಲ್ಲಿ ಇದ್ದ ಬಗ್ಗೆ ಹೇಳಿದ್ದರು. 
ಅಬೀದ್'ನನ್ನು ಬಂಧಿಸಿರುವ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

No comments