ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲು ನದಿಯನ್ನೇ ನುಂಗಿದ ಪ್ರಭಾವಿಗಳು
ನದಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದ ಪ್ರದೇಶಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಿ ತೆರವುಗೊಳಿಸಿದ ಘಟನೆ ತಾಲೂಕಿನ ಸೇನಾಪುರ ಮತ್ತು ಬಡಾಕೇರಿಯ ಜೋಯಿಸರಬೆಟ್ಟಿನಲ್ಲಿ ಶುಕ್ರವಾರ ನಡೆದಿದೆ.
ಹಲವು ಮಂದಿ ಪ್ರಭಾವಿ ವ್ಯಕ್ತಿಗಳು ಎರಡು ಕಡೆ ಅಕ್ರಮ ಮರಳುಗಾರಿಕೆ ನಡೆಸುವ ಉದ್ದೇಶದಿಂದ ಹೊಳೆಯನ್ನು ಒತ್ತುವರಿ ಮಾಡಿದ್ದಾರೆಂದು ಸಾರ್ವಜನಿಕರು ಪಂಚಾಯತ್ ಮತ್ತು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವಿಗೆ ಆದೇಶಿಸಿದ್ದರು.
ಉಪವಿಭಾಗಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಗುರುವಾರದಂದು ಪಂಚಾಯತ್ ವಿಎ ಸೇರಿದಂತೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವಿಗೆ ಯತ್ನಿಸಿದ್ದರು. ಸ್ಥಳದ ಪಟ್ಟಾ ಜಾಗದ ಮಾಲಿಕರು ತೆರವಿಗೆ ವಿರೋಧಿಸಿದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆದ್ದರಿಂದ ಉಪವಿಭಾಗಾಧಿಕಾರಿ ಅವರಿಗೆ ವಾಪಾಸಾಗುವಂತೆ ಸೂಚಿಸಿದ್ದರು. ಶುಕ್ರವಾರ ಸ್ವತಃ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.
ಸ್ಥಳದಲ್ಲಿ ಮರಳುಗಾರಿಕೆ ಸಂಬಂಧಿತ ಯಾವುದೇ ಕುರುಹು ಇಲ್ಲದ ಕಾರಣ ಯಾವುದೇ ಪ್ರಕರಣ ದಾಖಲಿಸದೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಸ್ಥಳಕ್ಕೆ ಯಾವುದೇ ವಾಹನಗಳು ಬಾರದಂತೆ ಕಂದಕಗಳನ್ನು ತೋಡಿರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಮೂಲಕ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ಮತ್ತು ಸಾಗಾಟವನ್ನು ತಡೆಗಟ್ಟಲು ಯತ್ನಿಸಲಾಗುತ್ತಿದೆ. ಈಗಾಗಲೇ ಹಲವೆಡೆ ದಾಳಿ ನಡೆಸಲಾಗಿದ್ದು, ಕೊಕ್ಕರ್ಣೆ ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
source karvali ale
No comments