ಗಿರಿಜನರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ದಿಡ್ಡಳ್ಳಿಯಲ್ಲೇ ಪರ್ಯಾಯ ವ್ಯವಸ್ಥೆಯ ಭರವಸೆ.
ಫೋಟೋ - ಸುವರ್ಣ ನ್ಯೂಸ್ |
ಮಡಿಕೇರಿ : ಮಡಿಕೇರಿಯ ದಿಡ್ಡಳ್ಳಿಯಲ್ಲಿ ಕಳೆದ 14 ದಿನಗಳಿಂದ ತಲೆಮೇಲಿನ ಸೂರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಗಿರಿಜನರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಈಗ ರಾಜ್ಯ ಸರ್ಕಾರ ಅದೇ ದಿಡ್ಡಳ್ಳಿ ಪರಿಸರದಲ್ಲಿ 577 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ.
ಡಿಸಂಬರ್ 7ರಂದು ವಿರಾಜಪೇಟೆಯ ದಿಡ್ಡಳ್ಲಿಯ ಅರಣ್ಯದಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದ 577 ಆದಿವಾಸಿ ಕುಟುಂಬಗಳನ್ನು ಜಿಲ್ಲಾಡಳಿತ ಹೊರದಬ್ಬಿತ್ತು. ಆದಿವಾಸಿಗಳು ವಾಸವಿದ್ದ ಪ್ರದೇಶ ಮೀಸಲು ಅರಣ್ಯ ಪ್ರದೇಶವೆಂದು ಗುಡಿಸಲುಗಳನ್ನು ಧ್ವಂಸ ಮಾಡಿ ವೃದ್ದರು, ಹೆಂಗಸರು, ಮಕ್ಕಳು, ಹಸುಗೂಸುಗಳೆಂದೂ ನೋಡದೆ ಹೊರಹಾಕಿ ದರ್ಪ ತೋರಿದ್ದರು. ಇದನ್ನು ವಿರೋಧಿಸಿ ಗಿರಿಜನ ಮಹಿಳೆಯರು ಬೆತ್ತಲೆ ಪ್ರತಿಭಟನೆ ಮಾಡಿದರು ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ.
ಆದರೆ ಈಗ ಗಿರಿಜನರ ಹೋರಾಟಕ್ಕೆ ರಾಜ್ಯದೆಲ್ಲೆಡೆಯಿಂದ ಜನರ ಬೆಂಬಲ ಸಿಕ್ಕಿದ್ದು ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈಹಾಕಿದೆ. ದಿಡ್ಡಳ್ಳಿಯಿಂದ ಒಕ್ಕಲೆಬ್ಬಿಸಿರುವ 577 ಕುಟುಂಬಗಳಿಗೆ ಅಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯಿಂದ ಕೊಂಚಮಟ್ಟಿಗೆ ನಿರಾಳರಾದ ಪ್ರತಿಭಟನಾಕಾರರು ಉಗ್ರಹೋರಾಟ ಕೈಬಿಟ್ಟು ಶಾಂತಿಯುತವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಮೂರು ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೋದರೆ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
No comments