Breaking News

ಬರ್ಲಿನ್ ಕ್ರಿಸ್ ಮಸ್ ಮಾರುಕಟ್ಟೆ ಮೇಲೆ ಶಂಕಿತ ಉಗ್ರದಾಳಿ, 12ಮಂದಿ ದುರ್ಮರಣ.

ಬರ್ಲಿನ್ : ಬರ್ಲಿನ್'ನ ಜನನಿಬಿಡ ಕ್ರಿಸ್ ಮಸ್ ಮಾರುಕಟ್ಟೆ ಮೇಲೆ ಟ್ರಕ್ ನುಗ್ಗಿದ ಪರಿಣಾಮ 12 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಮೇಲ್ನೋಟಕ್ಕೆ ಇದೊಂದು ಭಯೋತ್ಪಾದಕರ ಕೃತ್ಯವೆಂಬಂತೆ ಕಂಡುಬರುತ್ತಿದೆ. 
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬರ್ಲಿನ್'ನ ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೆಮೋರಿಯಲ್ ಚರ್ಚ್ ಬಳಿ ಇರುವ ಕ್ರಿಸ್'ಮಸ್ ಮಾರುಕಟ್ಟೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಕಪ್ಪುಬಣ್ಣದ ಗೂಡ್ಸ್ ಟ್ರಕ್ ನೆರೆದಿದ್ದ ಜನರ ಮೇಲೆ ಹಾದು ಹೋಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಸ್ಥಳದಲ್ಲಿದ್ದ ವಿದ್ಯುತ್ ಕಂಬಗಳು ಧರೆಗುರುಳಿ ಮಾರುಕಟ್ಟೆಯಲ್ಲಿ ಕಗ್ಗತ್ತಲು ಆವರಿಸಿತ್ತು. ಎಲ್ಲೆಡೆಯಿಂದಲೂ ಗಾಯಗೊಂಡವರ ಕೂಗಾಟ ಚೀರಾಟ ಕೇಳಿಬರುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಎಮ್ಮಾ ರಸ್ಟನ್ ಘಟನೆಯ ತೀವ್ರತೆಯನ್ನು ವಿವರಿಸಿದರು.
ಪೋಲೀಸರು ಘಟನೆಯ ಸಂಬಂಧ ವ್ಯಕ್ತಿಯೊಬ್ಬನನ್ನು ಬಂದಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ದಾಳಿಗೆ ಬಳಸಿದ ಟ್ರಕ್ ಡೆಲಿವರಿ ಕಂಪನಿಯೊಂದಕ್ಕೆ ಸೇರಿದ್ದಾಗಿದ್ದು , ಟ್ರಕ್ ಮಾಲಿಕನ ಪ್ರಕಾರ ಟ್ರಕ್ ಅನ್ನು ಉಗ್ರರು ಅಪಹರಿಸಿ ಈ ಕೃತ್ಯಕ್ಕೆ ಬಳಸಿಕೊಂಡಿರಬಹುದು ಎಂದು ಶಂಕಿಸಿದ್ದಾನೆ.

No comments