ಯಕ್ಷಗಾನದ ತವರೂರು ಕರಾವಳಿಯಲ್ಲೇ ಕಿಡಿಗೇಡಿಗಳಿಂದ ಯಕ್ಷಗಾನ ತಡೆಯಲು ಯತ್ನ.
ವಿಟ್ಲ : ವಿಟ್ಲ ಕನ್ಯಾನದ ಶಾಲೆಯೊಂದರ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು ಕಿಡಿಗೇಡಿಗಳು ತಡೆಯಲು ಯತ್ನಿಸಿದ ಘಟನೆ ನಡೆದಿದೆ.
ಕನ್ಯಾನದ ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಕಾರಂಜಿ ಏರ್ಪಡಿಸಲಾಗಿತ್ತು, ಗುರುವಾರ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿತ್ತು. ಇದರ ಪ್ರಯುಕ್ತ ಶಾಲೆಯ 7ಮಕ್ಕಳನ್ನೊಳಗೊಂಡ ತಂಡ ಸುದರ್ಷನ ವಿಜಯ ಎಂಬ ಯಕ್ಷಗಾನ ಪ್ರದರ್ಶಿಸಲಿತ್ತು.
ಆದರೆ ಯಕ್ಷಗಾನ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಕಿಡಿಗೇಡಿಗಳು ಯಕ್ಷಗಾನವನ್ನು ನಿಲ್ಲಿಸುವಂತೆ ಸಂಚಾಲಕರಿಗೆ ಬೆದರಿಕೆ ಹಾಕಿದರು, ಆದರೆ ಸಂಚಾಲಕರು ಇದೊಂದು ಮಕ್ಕಳಾ ಪ್ರತಿಭಾ ಕಾರಂಜಿ ಪ್ರದರ್ಶನವಾಗಿದ್ದು ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆಗ ಕಿಡಿಗೇಡಿಗಳು ಶಾಲೆಯ ಗೇಟಿನ ಬಳಿ ನಿಂತು ವಿಸಿಲ್ ಹಾಕುತ್ತಾ, ಕೂಗಾಟ ನಡೆಸಿದರು ಜೊತೆಗೆ ಮಕ್ಕಳ ಕಾರ್ಯಕ್ರಮ ನೋಡಲು ಆಗಮಿಸಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ, ಹೀಗಾಗಿ ಮಹಿಳೆಯರು ಸಭೆಯಿಂದೆದ್ದು ಶಾಲಾ ಆವರಣದೊಳಗೆ ತೆರಳಿದ್ದಾರೆ.
ಕಿಡಿಗೇಡಿಗಳು ಅಸಭ್ಯ ವರ್ತನೆ ಕಂಡ ಕಾರ್ಯಕ್ರಮ ಆಯೋಜಕರು ಸಭೆಯ ಮುಂಭಾಗಕ್ಕೆ ತೆರಳಿ ಯಕ್ಷಗಾನಕ್ಕೆ ಅಡ್ಡಿಪಡಿಸಬಾರದು, ಕಾರ್ಯಕ್ರಮ ಪೂರ್ವ ನಿಗದಿಯಂತೆಯೇ ಮುಂದುವರೆಯುವುದು ಎಂದು ಘೋಷಿಸಿದ್ದಾರೆ. ಕಿಡಿಗೇಡಿಗಳ ಉಪಟಳದ ನಡುವೆಯೂ ಕಾರ್ಯಕ್ರಮ ನಿಗದಿಯಂತೆ ಸಂಜೆ 5:30 ಕ್ಕೆ ಮುಕ್ತಾಯಗೊಳಿಸಲಾಯಿತು, ಪೋಲೀಸರು ಆಗಮಿಸಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಕ್ಷಗಾನದ ತವರೂರಾದ ಕರಾವಳಿಯಲ್ಲಿ ಕಿಡಿಗೇಡಿಗಳು ಈ ರೀತಿ ಯಕ್ಷಗಾನಕ್ಕೆ ಅಡ್ಡಿಪಡಿಸಿರುವುದು ಎಲ್ಲಾ ಕಡೆಯಿಂದಲೂ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಕಿಡಿಗೇಡಿಗಳ ಗುಂಪಿನಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಆರೋಪಿಗಳು ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
No comments