ಗಿರಿ ಜನರ ಹಕ್ಕನ್ನು ಕಸಿದ ಸರಕಾರ ,ಬದುಕಿನ ಹಕ್ಕಿಗಾಗಿ ಬೆತ್ತಲೆ ಪ್ರತಿಭಟನೆ
ಮಡಿಕೇರಿ : ದಿನಕ್ಕೊಂದು ಭಾಗ್ಯಗಳನ್ನು ನೀಡೋ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಕ್ಯಾಶ್ ಲೆಸ್ ಭಾರತ ಮಾಡಲು ಹೊರಟಿರೋ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಲಕ್ಷ ಲಕ್ಷದ ಕಾರುಗಳಲ್ಲಿ ಸುತ್ತಾಡೋ ಜನ ಪ್ರತಿನಿಧಿಗಳು, ಕೋಟಿ ಬೆಲೆಯ ಬಂಗಲೆ, ಐಷಾರಾಮಿ ಜೀವನ ಇವರಿಗೆಲ್ಲಿ ಗೊತ್ತಾಗಬೇಕು ಈ ಮೈಕೊರೆಯೋ ಚಳಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಡಿ ಬದುಕುತ್ತಿರುವ ಆದಿವಾಸಿ ಜನರ ಕೂಗು.
ಕೊಡಗು ಜಿಲ್ಲೆಯ ವಿರಾಜಪೇಟೆಯ ದಿಡ್ಡಳ್ಲಿಯ ಅರಣ್ಯದಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದ 577 ಆದಿವಾಸಿ ಕುಟುಂಬಗಳನ್ನು ಜಿಲ್ಲಾಡಳಿತ ಹೊರದಬ್ಬಿದೆ. ಆದಿವಾಸಿಗಳು ವಾಸವಿದ್ದ ಪ್ರದೇಶ ಮೀಸಲು ಅರಣ್ಯ ಪ್ರದೇಶವೆಂದು ಗುಡಿಸಲುಗಳನ್ನು ಧ್ವಂಸ ಮಾಡಿ ವೃದ್ದರು, ಹೆಂಗಸರು, ಮಕ್ಕಳು, ಹಸುಗೂಸುಗಳೆಂದೂ ನೋಡದೆ ಹೊರಹಾಕಿದ್ದಾರೆ.
ಡಿಸೆಂಬರ್ 7ರಂದು ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ಅರಣ್ಯದೊಳಗೆ ಜೆಸಿಬಿ ನುಗ್ಗಿಸಿದ ಪೊಲೀಸರು ಆದಿವಾಸಿಗಳು ವಾಸವಿದ್ದ 577 ಮನೆಗಳನ್ನು ನೆಲಸಮ ಮಾಡಿದ್ದಾರೆ. ಆದಿವಾಸಿ ಮಹಿಳೆಯರು, ಪುರುಷರು ಪೋಲೀಸರಲ್ಲಿ ಮನೆಕೆಡವದಂತೆ ಕೇಳಿಕೊಂಡರೂ ಅವರ ಮನ ಕರಗಲಿಲ್ಲ.ದಿಡ್ಡಳ್ಳಿಯಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸುವ ಕಾರ್ಯದ ವಿರುದ್ಧ ಬುಡಕಟ್ಟು ನಿವಾಸಿಗಳು ಹೋರಾಟ ತೀವ್ರಗೊಳಿಸಿದ್ದಾರೆ. ಹೋರಾಟಗಾರ್ತಿ ಮುತ್ತಮ್ಮ ಸೇರಿದಂತೆ ಕೆಲ ಗಿರಿಜನ ವಾಸಿಗಳು ಬೆತ್ತಲೆ ಮೆರವಣಿಗೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತವೆಂದರೆ ಮಹಿಳೆ ಸೇರಿದಂತೆ ಗಿರಿಜನರು ಬೆತ್ತಲಾಗಿ ಓಡಿದರೂ ಸರಕಾರ ಮತ್ತು ಜನಪ್ರತಿನಿದಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.ಜಿಲ್ಲೆಯ ಸಂಸದ ಪ್ರತಾಪ್ ಸಿಂಹ, ಶಾಸಕ ಶಾಸಕ ಕೆಜಿ ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಕಣ್ಣಿಗೆ ಬಟ್ಟೆ ಕಟ್ಟಿ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ.
No comments