Breaking News

ಕಾಂಗ್ರೆಸ್ ಬಿಟ್ಟ ಕೃಷ್ಣ ನಡಿಗೆ ಮೋದಿ ಕೆಡೆಗೆ...?

ಬೆಂಗಳೂರು, ಜ.29-ಮಾಜಿ ಪ್ರಧಾನಿ ಇಂದಿರಾಗಾಂಧಿ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡು ಕಳೆದ 46 ವರ್ಷಗಳಿಂದ ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯರ ಕಡೆಗಣನೆಯಿಂದ ಬೇಸತ್ತು ಇಂದು ಪಕ್ಷ ತೊರೆಯುವ ತೀರ್ಮಾನ ಕೈಗೊಂಡಿರುವ ಪಾಂಚಜನ್ಯ ಸಾರಥಿ ಕೃಷ್ಣ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಬಿಜೆಪಿಯಲ್ಲಿ ಕಂಡುಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.
ನೋಟು ಅಮಾನೀಕರಣ ಸೇರಿದಂತೆ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡು ವಿಶ್ವ ಸಮುದಾಯದ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಮನಸೋತಿರುವ ಎಸ್‍ಎಂಕೆ ಅವರು ಸದ್ಯದಲ್ಲೇ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಎಸ್‍ಎಂಕೆ ಸೇರ್ಪಡೆಗೆ ಮೋದಿ ಕೂಡ ಒಲವು ಹೊಂದಿದ್ದು, ಬಿಜೆಪಿಗೆ ಸೇರ್ಪಡೆಗೊಂಡರೆ ಅವರ ರಾಜಕೀಯ ಅನುಭವಕ್ಕೆ ತಕ್ಕಂತೆ ರಾಷ್ಟ್ರಮಟ್ಟದಲ್ಲಿ ಸೂಕ್ತ ಸ್ಥಾನಮಾನ ನೀಡಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದ್ದ ಸಂದರ್ಭದಲ್ಲಿ ಪಾಂಚಜನ್ಯ ರಥಯಾತ್ರೆ ಮೂಲಕ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ.
ಮುಖ್ಯಮಂತ್ರಿ ಅಲಂಕರಿಸಿದ ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ನಂತರ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿದೇಶಾಂಗ ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಂಡು ರಾಜ್ಯಮಟ್ಟದಲ್ಲೇ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ಅವಮಾನ ಮಾಡಿತ್ತು.  ಆದರೂ ಪಕ್ಷನಿಷ್ಠೆಯಿಂದ ತಮಗಾದ ಅವಮಾನವನ್ನು ಮೌನವಾಗಿಯೇ ಸಹಿಸಿಕೊಂಡಿದ್ದ ಎಸ್‍ಎಂಕೆ ಅವರ ಸಹನೆಯ ಕಟ್ಟೆ ಒಡೆದಿದ್ದು, ಪಕ್ಷದಿಂದ ಹೊರ ಹೋಗುವ ಗಟ್ಟಿ ನಿರ್ಧಾರ ಮಾಡಿರುವುದೇ ಅಲ್ಲದೆ, ಸೂಕ್ತ ಸಮಯದಲ್ಲಿ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ 



loading...

No comments