Breaking News

ಕೂದಲು ಉದುರುವ ಸಮಸ್ಯೆಯೇ

ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ. ಕೂದಲು ಉದುರುವುದನ್ನು ತಡೆಗಟ್ಟಬೇಕಾದರೆ ಮಾಂಸ, ಮೀನು, ಹಾಲು, ಬೆಣ್ಣೆ, ತುಪ್ಪ, ಮೊಳೆತ ಕಡಲೆಕಾಳು, ಮೊಳೆತ ಹೆಸರುಕಾಳು ಕ್ರಮವಾಗಿ ಸೇವಿಸಬೇಕು. ಕರಿದ ತಿಂಡಿ, ತಿನಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೋಪ, ವ್ಯಥೆ, ನಿರೀಕ್ಷೆ, ಕುತೂಹಲ, ಭಯ, ಚಿಂತೆ ಮತ್ತಿತರ ಕಾರಣಗಳಿಂದ ಮನಸ್ಸು ಕೆರಳದಂತೆ ಎಚ್ಚರಿಕೆ ವಹಿಸಬೇಕು. ನಿದ್ದೆ ಕೆಡುವುದು, ಅತಿಯಾದ ಲೈಂಗಿಕ ಸಂಭೋಗ, ಮಲಮೂತ್ರಗಳ ಒತ್ತಡ ತಡೆಹಿಡಿಯುವುದು ಸಾಧುವಲ್ಲ. ಪ್ರತಿದಿನವೂ ತಲೆಗೆ ತಣ್ಣೀರಿನ ತುಂತುರು ಸ್ನಾನ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದಿಷ್ಟೂ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದೇ ಅಲ್ಲದೆ, ಪ್ರತಿದಿನ ತಲೆಕೂದಲಿಗೆ ಎಳ್ಳೆಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆ ಹಚ್ಚಿ ಬಾಚುತ್ತಿರಬೇಕು. ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡಲು ಮರೆಯಬಾರದು. ಈ ಕ್ರಮ ಅನುಸರಿಸುವುದರಿಂದ ಕೂದಲು ಉದುರುವುದನ್ನು ಹಾಗೂ ತಲೆಯಲ್ಲಿ ಹೊಟ್ಟು ಏಳುವುದನ್ನು ಬಹುಮಟ್ಟಿಗೆ ನಿವಾರಿಸಬಹುದು.
ಮನೆ ಮದ್ದು:
೧)-ಸುಮಾರು ೧೦೦ ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಟೀ ಚಮಚ ನಿಂಬೆರಸ ಹಿಂಡಿ. ನಂತರ, ಆ ಎಣ್ಣೆಯೊಂದಿಗೆ ಅಷ್ಟೇ ಪ್ರಮಾಣ ಸುಣ್ಣದ ತಿಳಿ ಮಿಶ್ರ ಮಾಡಿ ಚೆನ್ನಾಗಿ ಕುಲುಕಿ. ಈ ಮಿಶ್ರಣವನ್ನು ಪ್ರತಿದಿನವೂ ಕೂದಲಿಗೆ ಹಚ್ಚುವ ಅಭ್ಯಾಸವಿಟ್ಟುಕೊಳ್ಳಿ.
೨)-ರಾತ್ರಿ ಮಲಗುವುದಕ್ಕಿಂತ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ಕ್ರಮ ಅನುಸರಿಸಿ. 
೩)-ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. 
೪)-ಮೆಂತ್ಯವನ್ನು ತಂಗಿನ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೫)-ವಾರಕ್ಕೊಮ್ಮೆ ಬೇವಿನ ಎಲೆಗಳ ಕಷಾಯದಿಂದ ತಲೆ ತೊಳೆಯಿರಿ.

loading...

No comments