Breaking News

ಎಸ್ ಎಂ ಕೃಷ್ಣ ರಾಜೀನಾಮೆ ಮೊದಲು ಸಿದ್ದರಾಮಯ್ಯನವರಿಗೆ ಬರೆದ ಪತ್ರವೆಷ್ಟು?


ಬೆಂಗಳೂರು : ಕಾಂಗ್ರೆಸ್ ಪಕ್ಷ ತ್ಯಜಿಸಿರುವ ಹಿರಿಯ ನಾಯಕ ಎಸ್ ಎಂ ಕೃಷ್ಣ ಕಳೆದೊಂದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ಬರೋಬ್ಬರಿ 35 ಪತ್ರಗಳನ್ನು ಬರೆದಿದ್ದರೂ ಒಂದಕ್ಕೂ ಮುಖ್ಯಮಂತ್ರಿಯಿಂದ ಸ್ಪಂದನೆ ದೊರಕಿಲ್ಲ, ಕನಿಷ್ಠ ಪತ್ರವನ್ನನುಸರಿಸಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವ ಗೋಜಿಗೂ ಹೋಗಿಲ್ಲವೆಂಬ ಅಂಶವನ್ನು ತಮ್ಮನ್ನು ಶನಿವಾರ ಭೆಟಿ ಮಾಡಿ ಪಕ್ಷ ತ್ಯಜಿಸದಂತೆ ಮನವೊಲಿಸಲು ಯತ್ನಿಸಿದ್ದ  ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹಾಗೂ ಇಂಧನ ಸಚಿವ  ಡಿ ಕೆ ಶಿವಕುಮಾರ್ ಅವರಲ್ಲಿ ಕೃಷ್ಣ ದೂರಿದ್ದರೆಂದು ಮೂಲಗಳು ಹೇಳುತ್ತವೆ.

ಇದು ಸಾಲದೆಂಬಂತೆ ಜೆಡಿ(ಎಸ್) ನಾಯಕರುಗಳಾದ ಚೆಲುವರಾಯಸ್ವಾಮಿ ಮತ್ತವರ ಸಮೀಪವರ್ತಿಗಳನ್ನು ಪಕ್ಷಕ್ಕೆ  ಸೇರಿಸಿಕೊಳ್ಳುವ ಮುಖ್ಯಮಂತ್ರಿಯ ಕ್ರಮ ಪಕ್ಷ ತ್ಯಜಿಸುವ ಕೃಷ್ಣರ ತೀರ್ಮಾನವನ್ನು ಮತ್ತಷ್ಟು ಗಟ್ಟಿಯಾಗಿಸಿತು ಎಂದು ಹೇಳಲಾಗಿದೆ.

“ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ತಳೆದಿರುವ ನಿರ್ಲಕ್ಷ್ಯ ಧೋರಣೆ ಕೃಷ್ಣರನ್ನು ತೀರಾ ಕಂಗೆಡಿಸಿತ್ತು.  ತಮ್ಮ ಪತ್ರಗಳಿಗೆ ದೊರೆಯದ ಸ್ಪಂದನೆ, ಹಿಂದಿನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಂಬರೀಶ್ ಅವರೊಂದಿಗಿನ ಸಂಬಂಧಗಳಲ್ಲಿ ಬಿರುಕು ಕೃಷ್ಣರಿಗೆ ಅರಗಿಸಲು ಕಷ್ಟವಾಗಿತ್ತು” ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಕೃಷ್ಣ ರಾಜೀನಾಮೆ ನೀಡಲಿದ್ದಾರೆಂದು ತಿಳಿಯುತ್ತಿದ್ದಂತೆಯೇ ಅವರು ತಮ್ಮ ನಿರ್ಧಾರ ಬದಲಿಸಿದರೆ ಅವರ ಸಲಹೆಗಳನ್ನು ಪರಿಗಣಿಸುವುದಾಗಿ ಸಿದ್ದರಾಮಯ್ಯ ಹೇಳಿರುವುದು ಕೃಷ್ಣಗೆ ಮತ್ತಷ್ಟು ಸಿಟ್ಟು ತರಿಸಿ ಅವರು ತಮ್ಮ ರಾಜೀನಾಮೆ ನಿರ್ಧಾರಕ್ಕೆ ಅಂಟಿಕೊಳ್ಳುವಂತೆ ಮಾಡಿತ್ತು.
via karvali ale

loading...

No comments