Breaking News

ಒಂದೇ ರಾಕೆಟ್‌ನಿಂದ 104 ಉಪಗ್ರಹಗಳು ಕಕ್ಷೆಗೆ


ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ  ವಿಶ್ವ  ದಾಖಲೆ
ಶ್ರೀಹರಿಕೋಟಾ :  ಒಂದೇ ರಾಕೆಟಿನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶಗಳ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ.

* ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ.

* ಇದುವರೆವಿಗೆ ಯಾವುದೇ ದೇಶ ಮಾಡದ ಸಾಧನೆಯನ್ನು ಮಾಡಿ ತೋರಿಸಿದ ಇಸ್ರೋ.

* ಬೆಳಿಗ್ಗೆ 9.28ಕ್ಕೆ 104 ಉಪಗ್ರಹಗಳನ್ನು ಹೊತ್ತು ಸಾಗಿದ ಪಿ.ಎಸ್.ಎಲ್.ವಿ- .ಸಿ 37 ನಿಗಧಿತ ಅವಧಿಯಲ್ಲಿ ಗುರಿಸಾಧಿಸಿತು.

* ಒಟ್ಟು 104 ಉಪಗ್ರಹಗಳ ತೂಕ 1350 ಕೆ.ಜಿ.

* ಭಾರತದ 730 ಕೆ.ಜಿ. ತೂಕದ ಕಾರ್ಟೋನಾಸಾಟ್, ತಲಾ 19 ಕೆ.ಜಿ.ತೂಕದ 103 ಉಪಗ್ರಹಗಳು.

* ಅಮೇರಿಕಾದ `ನಾಸಾ`ಗೆ ಹೋಲಿಸಿದರೆ ಅತಿ ಕಡಿಮೆ ಖರ್ಚಿನಲ್ಲಿ ಇಸ್ರೋದ ಉಪಗ್ರಹಗಳ ಉಡಾವಣೆ.

* ಹೀಗಾಗಿಯೇ, ಅಮೆರಿಕಾ ಸೇರಿದಂತೆ ವಿದೇಶಗಳಿಂದ ಇಸ್ರೋ ಆಶ್ರಯ ಕೋರಿಕೆ.

ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದುವರೆವಿಗೆ ಯಾವುದೇ ದೇಶ ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಉದಾಹರಣೆ ಇಲ್ಲ.

ಇಂದು ಬೆಳಿಗ್ಗೆ ನಿಗದಿತ ಸಮಯ 9.20ಕ್ಕೆ ಸರಿಯಾಗಿ 104 ಉಪಗ್ರಹಗಳನ್ನು ಹೊತ್ತು ಪಿ.ಎಸ್.ಎಲ್.ವಿ.- ಸಿ. 37 ರಾಕೆಟ್ ಗುರಿಯತ್ತ ಚಿಮ್ಮಿತು.

ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡ ಪಿ.ಎಸ್.ಎಲ್.ವಿ.- ಸಿ 37 ಹಾರಿದ 28ನೇ ನಿಮಿಷದಲ್ಲಿ ಉಪಗ್ರಹಗಳನ್ನು ನಿಗಧಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು. ಉಪಗ್ರಹಗಳು ಕಕ್ಷೆಗೆ ಸೇರ್ಪಡೆಯಾಗುತ್ತಿದ್ದಂತೆ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಲ್ಲಿ ಕುತೂಹಲ, ಆತಂಕದಿಂದ ರಾಕೆಟ್‌ನ ಹಾದಿಯನ್ನೇ ಗಮನಿಸುತ್ತಿದ್ದ ಇಸ್ರೋ ವಿಜ್ಞಾನಿಗಳ ಸಂಭ್ರಮ, ಸಂತೋಷಗಳು ಮುಗಿಲು ಮುಟ್ಟಿದವು.

ಎಲ್ಲಾ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ತಲುಪಿವೆ. ಈ ಸಾಧನೆಗೈದ ಇಸ್ರೋ ಎಲ್ಲಾ ವಿಜ್ಞಾನಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

ಪ್ರಧಾನಿ ಅಭಿನಂದನೆ

104 ಉಪಗ್ರಹಗಳನ್ನು ಒಂದೇ ಉಡಾವಣೆಯಲ್ಲಿ ಕಕ್ಷೆಗೆ ಸೇರಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

`ಭಾರತದ ಕಾರ್ಟೋಸಾಟ್ ಉಪಗ್ರಹ ಸೇರಿದಂತೆ 103 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ವಿಜ್ಞಾನಿಗಳನ್ನು, ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ಇದು ಇಡೀ ದೇಶ ಹೆಮ್ಮೆಪಡುವಂತಹ ಕ್ಷಣ ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟ್‌ನಲ್ಲಿ ಹೇಳಿದ್ದಾರೆ.
   

loading...

No comments