Breaking News

ಸಾವಿನ ದವಡೆಯಿಂದ ಪಾರಾದ 6 ಮೀನುಗಾರರು


ಮೀನುಗಾರಿಕಾ ಬೋಟುಗಳೆರಡು ಪರಸ್ಪರ ಡಿಕ್ಕಿ

ಮಂಗಳೂರು : ನಗರದ ಧಕ್ಕೆಯ ಬಂದರು ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮುಂಜಾನೆ ಮಲ್ಪೆಯಿಂದ 21 ನಾಟಿಕಲ್ ದೂರದಲ್ಲಿ ನಡೆದಿದೆ. ದುರಂತದಲ್ಲಿ ಸಿಲುಕಿದ್ದ ಆರು ಮಂದಿ ಮೀನುಗಾರರಾದ ಶಿರೂರಿನ ಅನ್ಸಾರ್, ಮುಹಮ್ಮದ್ ಗೌಸ್, ಹುಸೈನ್, ಉಮರ್, ಮುಜೀಬ್ ಹಾಗೂ ಕುಮಟಾದ ಬರೋಸ್ ಎಂಬವರು ಈಜಿ ದಡ ಸೇರಿ ಪಾರಾಗಿದ್ದಾರೆ. ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ `ಸೀ ಪರ್ಲ್’ ಹೆಸರಿನ ಬೋಟಿಗೆ ಅಲ್ ರಮೀಝ ಹೆಸರಿನ ಇನ್ನೊಂದು ಬೋಟ್ ಡಿಕ್ಕಿ ಹೊಡೆದು ಹಾನಿಗೀಡಾಗಿದೆ.

ಸೀ ಪರ್ಲ್ ಹೆಸರಿನ ಬೋಟು ಉಳ್ಳಾಲ ನಿವಾಸಿ ಅಕ್ಕರಕೆರೆಯ ರಿಯಾಝ್ ಅಹ್ಮದ್ ಎಂಬವರಿಗೆ ಸೇರಿದ್ದು, ಫೆ 10ರಂದು ಮೀನುಗಾರಿಕೆಗೆ ತೆರಳಿದ್ದು, ಫೆ 14ರ ಮುಂಜಾನೆ ಮೀನು ಹೇರಿಕೊಂಡು ವಾಪಾಸ್ ಬರುತ್ತಿತ್ತು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಅಲ್ ರಮೀಝ ಬೋಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಸೀ ಪರ್ಲ್ ಬೋಟಿಗೆ ಹಾನಿಯಾಗಿದ್ದು, ಬೋಟಿನೊಳಗೆ ನೀರು ಹೊಕ್ಕಿದೆ. ಕೂಡಲೇ ಅಲ್ ರಮೀಝ ಬೋಟಿನಲ್ಲಿದ್ದ ಮೀನುಗಾರರು ಸೀ ಪರ್ಲಿನಲ್ಲಿದ್ದ ಮೀನುಗಾರರನ್ನು ರಕ್ಷಿಸಿದರಲ್ಲದೇ, ಒಂದು ಗಂಟೆಗಳ ಕಾಲ ಪ್ರಯತ್ನ ಪಟ್ಟು ಬೋಟನ್ನೂ ಕೂಡಾ ಎಳೆದುಕೊಂಡು ದಡ ಮುಟ್ಟಿಸಿದ್ದಾರೆ.

ಬೋಟು ಹಾನಿ ಮತ್ತು ಮೀನುಗಳು ನೀರುಪಾಲಾಗಿದ್ದು, ಸುಮಾರು 25 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

loading...

No comments