Breaking News

ರಾಯಣ್ಣ ಬ್ರಿಗೇಡ್‌ನಲ್ಲಿ ಬಿರುಕು ,ಜೆಡಿಎಸ್‌ನತ್ತ ವಾಲುತಿರುವ ಮುಖಂಡರು ?



ಬೆಂಗಳೂರು : ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಡ್ಡು ಹೊಡೆಯಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ರೂಪಕೊಟ್ಟಿದ್ದ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಮುಕುಡಪ್ಪ ಹಾಗೂ ಕೆಲ ಮುಖಂಡರ ನಡುವೆ ಭಿನ್ನಮತ ಭುಗಿಲೆದ್ದಿದ್ದು, ಈ ಬ್ರಿಗೇಡ್‌ನ ಕೆಲ ಮುಖಂಡರು ಬೇರೆ ಬೇರೆ ರಾಜಕೀಯ ಪಕ್ಷಗಳತ್ತ ಚಿತ್ತ ಹರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಂದು ಕಾಲದ ಆಪ್ತರಾಗಿದ್ದ ಮುಕುಡಪ್ಪ ಅವರಿಂದ ದೂರವಾದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿ ಜತೆ ಗುರುತಿಸಿಕೊಂಡಿದ್ದರು. ಯಡಿಯೂರಪ್ಪನವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ ಮುಕುಡಪ್ಪನವರನ್ನು ಬಿಜೆಪಿಗೆ ಕರೆದುಕೊಂಡು ಹೋಗಿರಲಿಲ್ಲ.
ರಾಜಕೀಯವಾಗಿ ಏನಾದರೂ ಪ್ರಾಬಲ್ಯ ಸಾಧಿಸುವ ಉದ್ದೇಶದಿಂದ ಈಶ್ವರಪ್ಪನವರನ್ನು ಮುಂದಿಟ್ಟುಕೊಂಡು ಈ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ್ನು ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಈ ಬ್ರಿಗೇಡ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಸ್ಥಾಪಿಸಲಾಗಿದೆ ಎಂದು ಈಶ್ವರಪ್ಪನವರೆ ಹೇಳಿದ್ದರಾದರೂ ನಂತರ ಬಿಜೆಪಿಯಲ್ಲಿ ಅದರಲ್ಲೂ ಯಡಿಯೂರಪ್ಪನವರು ಬ್ರಿಗೇಡ್‌ ಬೇಡ ಎಂಬ ನಿಲುವಿಗೆ ಬಂದಿದ್ದು, ಬ್ರಿಗೇಡ್‌ನ ಮುಂಚೂಣಿಯಲ್ಲಿದ್ದವರಿಗೆ ಇರಿಸು-ಮುರಿಸು ಉಂಟು ಮಾಡಿತ್ತು.
ಬ್ರಿಗೇಡ್‌ ಸಂಬಂಧ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಂತಃಕಲಹವೇ ನಡೆದು ಹೋಗಿತ್ತು.
ಪಕ್ಷದ ಅಧ್ಯಕ್ಷ ಅಮಿತ್‌ಶಾ ಅವರ ಸಮ್ಮುಖದಲ್ಲೇ ಸಂಧಾನ ನಡೆದು ಈಶ್ವರಪ್ಪನವರು ಬ್ರಿಗೇಡ್‌ ಚಟುವಟಿಕೆಗಳಿಂದ ದೂರ ಇರುವಂತೆ ತೀರ್ಮಾನವೂ ಆಗಿತ್ತು. ಇದು ಬ್ರಿಗೇಡ್‌ ಚಟುವಟಿಕೆಗಳಿಗೆ ಪರೋಕ್ಷವಾಗಿ ಹೊಡೆತ ನೀಡಿತ್ತು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ರವರ ಸಂಧಾನದ ನಂತರ ಈಶ್ವರಪ್ಪನವರು ಬ್ರಿಗೇಡ್‌ ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತದೆ. ಸಾಮಾಜಿಕ ಸೇವಾ ಬದ್ದತೆಯೊಂದಿಗೆ ಕೆಲಸ ಮಾಡುತ್ತದೆ ಎಂದು ಹೇಳಿ ಅದರಂತೆ ಬ್ರಿಗೇಡ್ ಸಭೆ ನಡೆಸಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುವ ತೀರ್ಮಾನವನ್ನು ಮಾಡಲಾಗಿತ್ತು.
ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಅವರ ಕಾರ್ಯವೈಖರಿ ವಿರುದ್ದ ಕೆಲ ನಾಯಕರುಗಳು ಅಪಸ್ವರ ಎತ್ತಿತ್ತದ್ದರು. ಅವರನ್ನು ಆ ಹುದ್ದೆಯಿಂದ ಬದಲಾಯಿಸುವಂತೆ ಈಶ್ವರಪ್ಪನವರ ಮೇಲೆ ಒತ್ತಡ ಸಹ ಹೇರಿದ್ದರು. ಆದರೆ ಈಶ್ವರಪ್ಪನವರು ನಾಯಕರುಗಳನ್ನು ಸಮಾಧಾನಪಡಿಸಿ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನ ನಡೆಸಿದ್ದರು.
ಬ್ರಿಗೇ‌‌‌ಡ್‌ ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಕೆಲವರು ಬೇರೆ ರಾಜಕೀಯ ಪಕ್ಷಗಳತ್ತ ಚಿತ್ತ ಹರಿಸಿದ್ದಾರೆ.
ರಾಜಕೀಯ ಉದ್ದೇಶ ಇಲ್ಲ ಎನ್ನುವುದಾದರೆ ಬ್ರಿಗೇಡ್‌ ಇದ್ದೂ ಏನು ಪ್ರಯೋಜನ. ರಾಜಕೀಯ ಅಧಿಕಾರ ಇದ್ದರೆ ಮಾತ್ರ ಏನನ್ನಾದರೂ ಮಾಡಲು ಸಾಧ್ಯ. ನಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂಬ ಒತ್ತಡವನ್ನೂ ಕೆಲ ನಾಯಕರು ಈಶ್ವರಪ್ಪನವರ ಮೇಲೆ ಹಾಕಿದ್ದರು.
 ಜೆಡಿಎಸ್‌ನತ್ತ ಮುಖ
ಬ್ರಿಗೇಡ್‌ ಮುಂಚೂಣಿಯಲ್ಲಿದ್ದ ಮುಕುಡಪ್ಪ ಸೇರಿದಂತೆ ಕೆಲ ಮುಖಂಡರು ಜೆಡಿಎಸ್ ಸೇರುವ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಮಾತುಕತೆಗಳು ನಡೆದಿವೆ ಎಂದು ಬ್ರಿಗೇಡ್‌ನ ಮೂಲಗಳು ಹೇಳಿವೆ.
ಈಶ್ವರಪ್ಪನವರು ಬ್ರಿಗೇಡ್‌ ಚಟುವಟಿಕೆ ನಡೆಸುವುದಿಲ್ಲ ಎಂದು ಘೋಷಿಸಿರುವುದರಿಂದ ಬೇರೆ ಪಕ್ಷಗಳತ್ತ ಚಿತ್ತ ಹರಿಸುವುದು ಅನಿವಾರ್ಯವಾಗಿದೆ ಎಂದು ಬ್ರಿಗೇಡ್‌ನ ನಾಯಕರುಗಳು ಬಹಿರಂಗವಾಗಿಯೇ ಹೇಳುತ್ತಿದ್ದು, ಮುಕುಡಪ್ಪನವರು ಜೆಡಿಎಸ್ ಸೇರೋಣ ಎಂದು ಈ ನಾಯಕರುಗಳಿಗೆ ಸಲಹೆ ಮಾಡುತ್ತಿರುವುದು ಗುಟ್ಟೇನಲ್ಲ.
ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌ನ ಈಗಿನ ಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಬ್ರಿಗೇಡ್‌ನ ಮುಖಂಡರು ರಾಜಕೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ.
-sanjevani

loading...

No comments