Breaking News

ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು 14 ಶಿಫಾರಸು ಹಾಗೂ 9 ಹಕ್ಕೋತ್ತಾಯಗಳು

7

ಬೆಂಗಳೂರು : ಕನ್ನಡಿಗರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ 14 ಪ್ರಮುಖ ಶಿಫಾರಸುಗಳನ್ನು ಹಾಗೂ 9 ಹಕ್ಕೋತ್ತಾಯಗಳನ್ನು ಮಾಡಿದೆ.
ಪ್ರಮುಖ ಶಿಫಾರಸುಗಳು:
1.ಐಟಿ-ಬಿಟಿ ಬಹುರಾಷ್ಟ್ರೀಯ ಸಂಸ್ಥೆಗಳು, ವ್ಯಾಪಾರ, ವಾಣಿಜ್ಯ, ರೆಸಾರ್ಟ್, ಆಸ್ಪತ್ರೆ, ಮನೋರಂಜನಾ ಕೇಂದ್ರ, ಹೋಟೆಲ್ ಉದ್ಯಮ, ಸಾರಿಗೆ, ಪ್ರವಾಸೋದ್ಯಮ, ನವೋದ್ಯಮ, ಇ-ಕಾಮರ್ಸ್, ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ ಇವುಗಳಿಗೆ ರಾಜ್ಯ ಸರ್ಕಾರ ನೆಲ,ಜಲ, ವಿದ್ಯುತ್ ರಸ್ತೆ, ಹೆರಿಗೆ ರಜೆ ಸೌಲಭ್ಯ ನೀಡುತ್ತಿದೆ. ಇವುಗಳಲ್ಲಿ ಸಿ ಅಂಡ್ ಡಿ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರನ್ನೇ ನೇಮಿಸಬೇಕು.

2.ರಾಜ್ಯದಲ್ಲಿರುವ ತಾಂತ್ರಿಕ ಕಾಲೇಜುಗಳಲ್ಲೇ ಕ್ಯಾಂಪಸ್ ಆಯ್ಕೆ ನಡೆಯಬೇಕು. ಆದೇಶಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಕಾರ್ಮಿಕ ಇಲಾಖೆ ಪರಿಶೀಲಿಸಬೇಕು, ಈ ಇಲಾಖೆಗಳು ನಡೆಸುವ ಪರಾಮರ್ಶೆಯಲ್ಲಿ ಲೋಪವಿದ್ದರೆ ಅದನ್ನು ಪರಿಶೀಲಿಸುವ ಮತ್ತು ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ವಹಿಸುವ ಅಧಿಕಾರವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ನೀಡಬೇಕು.

3. ರಾಜ್ಯದಲ್ಲಿ ವ್ಯವಹಾರ ನಡೆಸುವ ಖಾಸಗಿ ಬಹುರಾಷ್ಟ್ರೀಯ ಬ್ಯಾಂಕ್‍ಗಳು ಒಳಗೊಂಡಂತೆ ನೇಮಕಾತಿ ವೇಳೆ ಕನ್ನಡ ಭಾಷಾಜ್ಞಾನ ಕಡ್ಡಾಯಗೊಳಿಸಬೇಕು. ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಕಲಿತವರನ್ನು ಹೊರತುಪಡಿಸಿ ಉಳಿದವರಿಗೆ ರಾಜ್ಯ ಭಾಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಷರತ್ತು ವಿಧಿಸಬೇಕು. ಈ ನಿಯಮವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪಾಲಿಸುತ್ತಿದೆ.
4. ರಾಜ್ಯ ಸರ್ಕಾರದ ಎಲ್ಲಾ ಉದ್ದಿಮೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು, ಅನಿವಾರ್ಯ ಸಂದರ್ಭದಲ್ಲಿ ಉನ್ನತ ತಾಂತ್ರಿಕತೆ ಕೌಶಲ್ಯವಿರುವ ಅನ್ಯ ರಾಜ್ಯದವರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.

5. ಅಪ್ರೆಂಟಿಸ್‍ಗಳ ಆಯ್ಕೆಯನ್ನು ತಾಂತ್ರಿಕ ಇಲಾಖೆ ಮಾಡುತ್ತಿದ್ದು, ಅಲ್ಲಿ ಹೊರರಾಜ್ಯಗಳ ಅಭ್ಯರ್ಥಿಗಳು ಬರುತ್ತಿದ್ದಾರೆ. ಅದನ್ನು ತಡೆಯಲು ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಓದಿದವರನ್ನು ಮಾತ್ರ ಪರಿಗಣಿಸಬೇಕು.

6. ಸರ್ಕಾರಿ ಇಲಾಖೆಗಳು ಮತ್ತು ಉದ್ದಿಮೆಗಳಲ್ಲಿ ಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ನೇಮಕಾತಿ ಮಾಡುವಾಗ ಕಡ್ಡಾಯವಾಗಿ ಕನ್ನಡಿಗರಿಗೆ ಆದ್ಯತೆ, ಹೊರಗುತ್ತಿಗೆ ಸಂಸ್ಥೆಗಳಿಗೂ ಇದೇ ಷರತ್ತು ವಿಧಿಸಬೇಕು. ಇದರ ನಿಗಾ ವಹಿಸಲು ಅಧಿಕಾರವನ್ನು ಕಾರ್ಮಿಕ ಇಲಾಖೆಗೆ ಹಾಗೂ ಮೇಲುಸ್ತುವಾರಿಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ನೀಡಬೇಕು.

7. ನೂರಕ್ಕಿಂತಲೂ ಹೆಚ್ಚು ನೌಕರರಿರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡದ ಪ್ರತಿನಿಧಿಯನ್ನು ಸೇರಿಸಬೇಕು. ಖಾಸಗಿ ಮತ್ತು ಕೇಂದ್ರ ಸಾರ್ವಜನಿಕ ಉದ್ದಿಮೆಗಳ ನೇಮಕಾತಿ ಪಟ್ಟಿಯನ್ನು ವಾಣಿಜ್ಯ ಕೈಗಾರಿಕೆ ಇಲಾಖೆಗೆ ಕಳುಹಿಸಲಾಗುವುದು. ಅದೇ ಪಟ್ಟಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೂ ಕಳುಹಿಸಬೇಕು.

8. ಐಟಿಐ ಶಿಕ್ಷಣ ಪಡೆದ ಅಭ್ಯರ್ಥಿಗಳು ಪ್ರಸ್ತುತ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ ಹೊಂದಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ. ಇದಕ್ಕಾಗಿ ಕಾಲೋಚಿತ ಬೆಳವಣಿಗೆಗೆ ಅನುಗುಣವಾಗಿ ತಂತ್ರಜ್ಞಾನ ಕಲಿಸುವ ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿ ರಚಿಸಬೇಕು.

9. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ಉದ್ಯೋಗಾವಕಾಶಗಳ ಮಾಹಿತಿ ನೀಡುವ ಎಂಪ್ಲಾಯ್‍ಮೆಂಟ್ ನ್ಯೂಸ್ ಪತ್ರಿಕೆಯನ್ನು ವಾರ್ತಾ ಇಲಾಖೆ ಮೂಲಕ ಕನ್ನಡದಲ್ಲಿ ಪ್ರಕಟಿಸಬೇಕು. ಕಾಲಕಾಲಕ್ಕೆ ಕನ್ನಡ ದಿನಪತ್ರಿಕೆಗಳು ಉದ್ಯೋಗಾವಕಾಶದ ಜಾಹೀರಾತು ನೀಡಬೇಕು.

10. ಸ್ಥಳೀಯರು ಎಂದು ಪರಿಗಣಿಸಲು 15 ವರ್ಷ ರಾಜ್ಯದಲ್ಲಿ ವಾಸವಾಗಿರಬೇಕಲ್ಲದೆ, ಕನ್ನಡ ಭಾಷಾ ಜ್ಞಾನವಿರಬೇಕು. ಕನ್ನಡದಲ್ಲಿ ಎಸ್‍ಎಸ್‍ಎಲ್‍ಸಿವರೆಗೂ ಓದಿದ ಶಾಲಾ ಸರ್ಟಿಫಿಕೇಟ್, ಆಧಾರ್‍ಕಾರ್ಡ್, ಪಡಿತರ ಚೀಟಿ , ಜನ್ಮಪ್ರಮಾಣ ಪತ್ರಗಳಲ್ಲಿ ಒಂದನ್ನಾದರೂ ಹೊಂದಿರಬೇಕು.  ಹೊರ ರಾಜ್ಯ ಸೇರಿದಂತೆ ಯಾವುದೇ ದೇಶದಲ್ಲಿ ಎಸ್‍ಎಸ್‍ಎಲ್‍ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಿ ಒಳನಾಡಿನ ಕನ್ನಡಿಗರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.

11. ರಾಜ್ಯ, ಕೇಂದ್ರ, ಸರ್ಕಾರಿ ಕಚೇರಿಗಳಲ್ಲೂ ಉದ್ಯಮಿಗಳು ಮತ್ತು ಖಾಸಗಿ ಕಂಪೆನಿಗಳು ನಾಮಫಲಕ, ಜಾಹೀರಾತು ಫಲಕ, ಹೆದ್ದಾರಿ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು.

12. ರಾಜ್ಯದಲ್ಲಿ ಐಸಿಎಸ್‍ಇ, ಸಿಬಿಎಸ್‍ಇ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿದಂತೆ ಆಂಗ್ಲಭಾಷಾ ಶಿಕ್ಷಣ ಸಂಸ್ಥೆಗಳಲ್ಲಿ 1 ರಿಂದ 10ನೆ ತರಗತಿವರೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು.

13. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಕನ್ನಡದಲ್ಲೇ ಉತ್ತರಿಸುವ ಅವಕಾಶವಿರಬೇಕು. ಇದಕ್ಕೆ ಅಗತ್ಯ ಪಠ್ಯಕ್ರಮವನ್ನು ಸೃಷ್ಟಿಸುವ ಕೆಲಸವನ್ನು ಆಯಾ ಇಲಾಖೆ ಮಾಡಬೇಕು. ಕನ್ನಡ ವಿವಿಯ ನೆರವು ಪಡೆಯಬೇಕು.

14. ಸರ್ಕಾರದ ಎಲ್ಲಾ ಇಲಾಖೆಗಳ ಮತ್ತು ನಿಗಮ ಮಂಡಳಿಗಳಲ್ಲಿ ಕನ್ನಡ ತಂತ್ರಾಂಶ ಬಳಸಬೇಕು. ಅಂತರ್ಜಾಲ ಸಂವಹನ ಕನ್ನಡದಲ್ಲೆ ನಡೆಯಬೇಕು.

ಇದರೊಂದಿಗೆ ಕೇಂದ್ರಕ್ಕೆ ಹೊಸ ಶಿಫಾರಸು ಮಾಡಿರುವ ಪ್ರಮುಖ ಅಂಶಗಳು ಹೀಗಿವೆ:
ಸರ್ಕಾರ ಮತ್ತು ಖಾಸಗಿ ಉದ್ಯಮಗಳ ಅಧಿಕಾರೇತರ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಕಲ್ಪಿಸಲು ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸಲು ಕೇಂದ್ರದ ಮೇಲೆ ಒತ್ತಾಯಿಸಲಾಗಿದೆ.  ರಾಜ್ಯ ವಿಧಾನಮಂಡಲದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಬೇಕು, ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಲು ಒತ್ತಾಯಿಸಬೇಕು.
ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿರಿಸಬೇಕು. ಮ್ಯಾನೇಜ್‍ಮೆಂಟ್ ಟ್ರೈನಿ ಆಯ್ಕೆ ಮಾಡುವಾಗ ರಾಜ್ಯದ ಕಾಲೇಜುಗಳ ಕ್ಯಾಂಪಸ್‍ನಲ್ಲೇ ಸಂದರ್ಶನ ನಡೆಯಬೇಕು. ಕೇಂದ್ರದ ಎಲ್ಲಾ ಉದ್ಯೋಗಗಳಿಗೆ ಎಸ್‍ಎಸ್‍ಎಲ್‍ಸಿಯಲ್ಲಿ ಸ್ಥಳೀಯ ಭಾಷೆ ಕಲಿತಿರಬೇಕು ಎಂಬ ನಿಯಮ ಸೇರಿಸಲು ಒತ್ತಾಯಿಸಬೇಕು.  ವೃತ್ತಿ ಆಧಾರಿತ ತರಬೇತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಬೇಕು, ಸ್ಟಾಫ್ ಸೆಲೆಕ್ಷನ್‍ನಿಂದ ನಡೆಯುವ ಪರೀಕ್ಷೆಯನ್ನು ಹಿಂದಿ ಮತ್ತು ಕನ್ನಡದಲ್ಲಿ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಾಗಿದೆ.
-ee sanje


loading...

No comments