Breaking News

ವೀರ ಬಲಿದಾನಿ ಭಗತ್ ಸಿಂಗ್ ಹಾಗೂ ಸಹಚರರನ್ನು ಗಲ್ಲಿಗೇರಿಸಿದ್ದು ಫೆ14, ವೈರಲ್ ಮೆಸೇಜ್ ಹಿಂದಿನ ಸತ್ಯಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ :
ಭಾರತದಲ್ಲಿ ಫೆಬ್ರವರಿ 14ನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ.
ಆದರೆ,
ಅದೇ ಫೆಬ್ರವರಿ 14 1931 ರ ಬೆಳಗ್ಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರ್ ಮತ್ತು ಸುಖ್ ದೇವರನ್ನು ಬ್ರಿಟೀಷರು ಗಲ್ಲಿಗೆ ಏರಿಸಿದರು. ಆದರೆ ನಾವು ವೀರ ಬಲಿದಾನಿಗಳ ದಿನದಂದು ಪ್ರೇಮಿಗಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.
ಈ ಮೆಸೇಜ್ ಅನ್ನು ಎಲ್ಲೆಡೆ ಶೇರ್ ಮಾಡಿ, ಎಲ್ಲರಿಗೂ ಗೊತ್ತಾಗಲಿ. ಸ್ವಾತಂತ್ರ್ಯ ವೀರರ ಬಲಿದಾನ ಮರೆಯದಿರೋಣ.
ನಾವು ಮೊದಲು ಭಾರತೀಯರಾಗೋಣ.
ಇದು ನಿಜವೇ ಸುಳ್ಳೇ..???
ಸುಳ್ಳು
ಹಾಗಾದರೆ ನಿಜವಾದರೂ ಏನು..???
ವೀರ ಬಲಿದಾನಿಗಳಾದ ಭಗತ್ ಸಿಂಗ್, ರಾಜ್ ಗುರ್ ಮತ್ತು ಸುಖ್ ದೇವರನ್ನು ಬ್ರಿಟೀಷರು ಗಲ್ಲಿಗೆ ಏರಿಸಿದ್ದು ಫೆಬ್ರವರಿ 14ರಂದಲ್ಲ, ಮಾರ್ಚ್ 23ರಂದು. ಭಗತ್ ಸಿಂಗ್ ಹಾಗೂ ಸಂಗಡಿಗರನ್ನು ಸಂಸತ್ತಿನ ಮೇಲೆ ಬಾಂಬ್ ಎಸೆತ, ಉಪವಾಸ ಸತ್ಯಾಗ್ರಹ ಹಾಗೂ ಕೊಲೆ ಆರೋಪದ ಮೇಲೆ ಬ್ರಿಟಿಷ್ ಅಧಿಕಾರಿಗಳು 1929 ರಂದು ಬಂಧಿಸಿದರು. 
ಬಂಧನವಾದರೂ ಅಂಜದ ಭಗತ್ ಸಿಂಗ್ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ  ಮಂಡಿಸಿದ ವಾದಗಳು,ನೀಡಿದ ಹೇಳಿಕೆಗಳು, ನಂತರ ವಿವಿಧ ಸಂದರ್ಭದಲ್ಲಿ ಆತ ಬರೆದ ಅನೇಕ ಪತ್ರಗಳು, ವಿವಿಧ ವಿಷಯಗಳ ಮೇಲೆ ಪತ್ರಿಕೆಗಳಿಗೆ ಸೆರೆಮನೆಯಿಂದಲೇ ಬರೆದ ಲೇಖನಗಳು ಪರೋಕ್ಷವಾಗಿ ಬ್ರಿಟೀಷ್ ಸರ್ಕಾರಕ್ಕೆ ನಡುಕವನ್ನುಂಟು ಮಾಡಿದ್ದವು.
ಈ ಕಾರಣಕ್ಕಾಗಿ ನಿಧಾನವಾಗಿ ನಡೆಯುತಿದ್ದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಅಂದಿನ ವೈಸ್ ರಾಯ್ ಲಾರ್ಡ್ ಇರ್ವಿನ್ ಆದೇಶ ನೀಡಿದ. ಅದರಂತೆ ಲಾಹೋರ್ ನಗರದ ಪೂಂಚ್ ಹೌಸ್ ನಲ್ಲಿ ವಿಚಾರಣೆ ಆರಂಭವಾಯಿತು. ಜುಲೈ 2ರಂದು ನ್ಯಾಯಮಂಡಳಿಯಲ್ಲಿದ್ದ ನ್ಯಾಯಾಧೀಶರನ್ನು ಬದಲಿಸಿ,ಮೂವರು ಬ್ರಿಟೀಷ್ ನ್ಯಾಯಧೀಶರರು ಇರುವಂತೆ ನೋಡಿಕೊಂಡಿದ್ದ ವೈಸ್‍ರಾಯ್ ಇರ್ವಿನ್. 
ಭಗತ್ ಸಿಂಗ್ ಮತ್ತು ಅವನ ಸಂಗಡಿಗರ ವಿಚಾರಣೆಯ ನಂತರ 1930ರ ಅಕ್ಟೋಬರ್ 31 ರಂದು ವೈಸ್‍ರಾಯ್ ಇರ್ವಿನ್ ವಿಶೇಷವಾಗಿ ನೇಮಿಸಿದ ಮೂವರು ಬ್ರಿಟೀಷ್ ನ್ಯಾಯಧೀಶರನ್ನು ಒಳಗೊಂಡಿದ್ದ ಪೀಠ 300ಪುಟಗಳ ತೀರ್ಪನ್ನು  ಪ್ರಕಟಿಸಿತು. ಸಂಸತ್ತಿನ ಮೇಲೆ ಬಾಂಬ್ ಎಸೆತ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಇವರಿಗೆ ಮರಣದಂಡನೆಯನ್ನು ವಿಧಿಸಿ,  ಉಳಿದ ಹನ್ನೆರೆಡು ಮಂದಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು  ನೀಡಲಾಗಿತ್ತು.
ಮರಣದಂಡನೆ ಆದೇಶ ಹೊರಡಿಸಿದ ಕೆಲವೇ ತಿಂಗಳ ಅವಧಿಯಲ್ಲಿ 1931 ಮಾರ್ಚ್ 23ರ ಸಂಜೆ 7:30 ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಆತನ ಸಂಗಡಿಗರನ್ನು ಲಾಹೋರ್ ಜೈಲಿನಲ್ಲಿ ನೇಣುಗಂಬಕ್ಕೇರಿಸಿತು. ನಂತರ ಮಧ್ಯರಾತ್ರಿ ಸಟ್ಲೇಜ್ ನದಿಯ ದಡದ ಹುಸೇನಿವಾಲ ಎಂಬ ಸ್ಥಳದಲ್ಲಿ ಗುಪ್ತವಾಗಿ ಭಗತ್ ಸಿಂಗ್ ಮತ್ತು ಸಹಚರರ ಅಂತ್ಯಸಂಸ್ಕಾರವನ್ನು ನೆರೆವೇರಿಸಲಾಯಿತು.
ಆದರೆ ಇಂದು ಇತಿಹಾಸವನ್ನು ಅರಿಯದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿ ವೀರಬಲಿದಾನಿಗಳಿಗೆ ಅಪಮಾನ ಮಾಡುತ್ತಿದ್ದಾರೆ.
loading...

No comments