Breaking News

ಪಿಎಫೈ ಯುನಿಟಿ ಮಾರ್ಚ್ ಗೆ ತಟ್ಟಿದ ಬಿಸಿ



ಮಂಗಳೂರು : ಅನುಮತಿಯಿಲ್ಲದೆ ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದಲ್ಲಿ ಫೆ 17ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರಕ್ಕಾಗಿ ಉಳ್ಳಾಲ, ತೊಕ್ಕೊಟ್ಟು, ಕಲ್ಲಾಪುವಿನಲ್ಲಿ ಹಾಕಿದ್ದ ಸ್ವಾಗತ ಕಮಾನುಗಳು, ಬ್ಯಾನರ್, ಧ್ವಜಗಳನ್ನು ಪೊಲೀಸರು ಗುರುವಾರ ಮುಂಜಾನೆ ತೆರವುಗೊಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸೂಚಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದೀಗ ಕಾರ್ಯಕ್ರಮವನ್ನು ಉಳ್ಳಾಲದ ಬದಲು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಫೆ 17ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವರ್ಷಾಚರಣೆ ಪ್ರಯುಕ್ತ ಉಳ್ಳಾಲದಲ್ಲಿ ಯುನಿಟಿ ಮಾರ್ಚ್ ಹೆಸರಿನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಬುಧವಾರ ತಡರಾತ್ರಿಯೇ ಭಾರೀ ಕಟೌಟ್, ಸ್ವಾಗತ ಕಮಾನುಗಳನ್ನು ಉಳ್ಳಾಲ, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ ಪರಿಸರದಲ್ಲಿ ಅಳವಡಿಸಲಾಗಿತ್ತು.

ಆದರೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರ ಆದೇಶದಂತೆ ಎಸಿಪಿ ಶೃತಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಎಲ್ಲವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಕಾರ್ಯಕ್ರಮವನ್ನು ಸಂಘಟಿಸಿರುವವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಿಸಲಾಗಿದೆ.

ಉಳ್ಳಾಲದ ಬದಲು ಮಂಗಳೂರಲ್ಲಿ ರ್ಯಾಲಿ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಫೆ 17ರಂದು ಉಳ್ಳಾಲ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದ್ದು, ಮಂಗಳೂರಿನಲ್ಲೂ ಕಾರ್ಯಕ್ರಮ ನಡೆಸುವುದಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ 5.30ರೊಳಗೆ ಸಂಘಟಕರಿಗೆ ಕಾರ್ಯಕ್ರಮವನ್ನು ಮುಗಿಸುವಂತೆ ಎಚ್ಚರಿಸಲಾಗಿದೆ.

144 ಸೆಕ್ಷನ್ ಜಾರಿ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅಂದರೆ ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳು ನಡೆಸಿರುವ ಯಾವುದೇ ಸಭಾ ಕಾರ್ಯಕ್ರಮ, ರ್ಯಾಲಿ, ಪರೇಡ್, ಮಾರ್ಚ್ ಫಾಸ್ಟನ್ನು  ಫೆ 17ರಂದು ಬೆಳಿಗ್ಗೆ 5 ಗಂಟೆಯಿಂದ ಫೆ 19ರಂದು ರಾತ್ರಿ 12 ಗಂಟೆಯವರೆಗೆ ನಿರ್ಬಂಧಿಸಿ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಈ ಆದೇಶವನ್ನು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ ಕೂಡಾ ಜಾರಿ ಮಾಡಿದ್ದಾರೆ. ವಿಶೇಷವಾಗಿ ಉಳ್ಳಾಲದಾದ್ಯಂತ ಗುರುವಾರ ಸಂಜೆ 6ರಿಂದ ಫೆ 25ರ ಬೆಳಗ್ಗಿನವರೆಗೂ  ನಿಷೇಧಾಜ್ಞೆಯನ್ನು ಕಡ್ಡಾಯ ಮಾಡಲಾಗಿದೆ.

ಆದರೂ ಬಿಗಿ ಬಂದೋಬಸ್ತ್ ಹಿನ್ನೆಲೆಯಲ್ಲಿ ಉಳ್ಳಾಲ ಹಾಗೂ ಕೆ ಎಸ್ ಆರ್ ಪಿ ಪೊಲೀಸರು ಮೊಗವೀರಪಟ್ನ, ಕೋಟೆಪುರ, ಕೋಡಿ, ದರ್ಗಾ ವಠಾರ, ಮಾಸ್ತಿಕಟ್ಟೆಯಿಂದ ಅಬ್ಬಕ್ಕ ವೃತ್ತದವರೆಗೆ ಪೊಲೀಸರು ಮಾರ್ಚ್ ನಡೆಸಿದರು
loading...

No comments