ಸಂಘಪರಿವಾರ ನೀಡಿದ ಬಂದ್ ಕರೆ ಅಸಾಂವಿಧಾನಿಕ’ ಮುನೀರ್
ಮಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ವಿರೋಧಿಸಿ ಹರತಾಳಕ್ಕೆ ಕರೆ ನೀಡಿರುವ ಸಂಘ ಪರಿವಾರದ ನಡೆ ಅಸಾಂವಿಧಾನಿಕ ಎಂದು ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಸುದ್ದಿಗಾರರಲ್ಲಿ ಮಾತಾಡಿದ ಅವರು, “ಫೆ 25ರಂದು ಮಂಗಳೂರಿನಲ್ಲಿ ಸಿಪಿಐಎಂ ಪಕ್ಷ ಆಯೋಜಿಸಿದ ಸೌಹಾರ್ದ ರ್ಯಾಲಿಯನ್ನು ಬೆಂಬಲಿಸಿ ಈಗಾಗಲೇ ನಾವು ಸಾಕಷ್ಟು ಪ್ರಚಾರ ನಡೆಸಿದ್ದೇವೆ. ನಮ್ಮ ಸಮಾವೇಶಕ್ಕೆ ಮತ್ತು ರ್ಯಾಲಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ಕೋಮುಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಅವರು ತಿಳಿಸಿದರು.
“ಕರಾವಳಿಯಲ್ಲಿ ಸೌಹಾರ್ದತೆ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದ್ದು, ಸಂಘಪರಿವಾರ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಒಬ್ಬ ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಲು ತಡೆಯೊಡ್ಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತದ ಬದಲಾಗಿ ಸಂಘಪರಿವಾರದ ಆಡಳಿತವಿದೆ” ಎಂದು ಆರೋಪಿಸಿದರು.
“ದಕ್ಷಿಣ ಕನ್ನಡದಲ್ಲಿ 13 ಮಂದಿ, ಕೇರಳದಲ್ಲಿ 250ಕ್ಕೂ ಅಧಿಕ ಮಂದಿ ಸಂಘಪರಿವಾರದ ಕೃತ್ಯಗಳಿಗೆ ಬಲಿಯಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದೂಗಳೇ ಆಗಿದ್ದಾರೆ. ಕೇರಳದ ಉಸ್ತುವಾರಿಯಾಗಿರುವ ನಳಿನಕುಮಾರ್ ಕಟೀಲು ಅವರ ಕೇರಳ ಪ್ರವೇಶಕ್ಕೆ ಸಿಪಿಎಂ ಎಲ್ಲಿ ಎಂದೂ ತಡೆಯನ್ನುಂಟು ಮಾಡಿಲ್ಲ. ಸಂಘಪರಿವಾರ ಆತ್ಮಾವಲೋಕನ ಮಾಡಿಕೊಂಡು ಬಂದ್ ಕರೆಯನ್ನು ವಾಪಾಸು ಪಡೆಯಬೇಕಿದೆ. ಬಲವಂತವಾಗಿ ಬಂದ್ ನಡೆಸಲು ಮುಂದಾಗಿರುವ ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ” ಎಂದರು.
K ALE
loading...
No comments