Breaking News

ಎಸಿಬಿ ಬಲೆಗೆ ಬಿದ್ದ ಭ್ರಷ್ಟರು


ಬೆಂಗಳೂರು :ಭ್ರಷ್ಟ ಅಧಿಕಾರಿಗಳ ವಿರುದ್ಧ ಬೇಟೆಯನ್ನು ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು. ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ಸೇರಿದಂತೆ 7 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದವರು
* ಕರಿಯಪ್ಪ – ಸಹಾಯಕ ಆಯುಕ್ತ,  ಆದಾಯ ತೆರಿಗೆ, ಧಾರವಾಡ
* ಸಲೀಂ ಸಾದುಸಾಬ್ ಸೈಯದ್ – ಉಪ ತಹಶೀಲ್ದಾರ್, ಹಿರೇಬಾಗೇವಾಡಿ
* ಕೆ.ಟಿ. ನಾಗರಾಜ್ – ಮುಖ್ಯ ಇಂಜಿನಿಯರ್, ನಗರ ಯೋಜನೆ,  ಬಿಬಿಎಂಪಿ
* ಪಿ.ಡಿ. ಕುಮಾರ್ – ಎಇಇ ಬಿಡಿಎ
* ಜಗನ್ನಾಥ್ – ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯ್ತಿ, ಬೀದರ್
* ಕರುಣಾಕರ – ಹಿರಿಯ ಮೋಟಾರು ವಾಹನ ಇನ್ಸ್‌ಪೆಕ್ಟರ್, ಚಿತ್ರದುರ್ಗ
* ಶಿವಕುಮಾರ ಡೊಳ್ಳನ – ಪಿಡಿಓ, ಗದಗ 
ಧಾರವಾಡದ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ, ಬೆಳಗಾವಿಯ ಹಿರೇಬಾಗೇವಾಡಿಯ ಉಪ ತಹಶೀಲ್ದಾರ್ ಸಲೀಂ ಸಾದುಸಾಬ್ ಸೈಯದ್, ಬಿಬಿಎಂಪಿಯ ನಗರ ಯೋಜನೆ ಮುಖ್ಯ ಇಂಜಿನಿಯರ್ ಕೆ.ಟಿ. ನಾಗರಾಜ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಡಿ. ಕುಮಾರ್, ಬೀದರ್‌ನ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ್, ಚಿತ್ರದುರ್ಗದ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ಇನ್ಸ್‌ಪೆಕ್ಟರ್ ಕರುಣಾಕರ, ಗದಗದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಡೊಳ್ಳನ ಅವರ ಕಚೇರಿ, ಮನೆಗಳ ಮೇಲೆ ಮುಂಜಾನೆಯಿಂದಲೇ ದಾಳಿ  ನಡೆಸಲಾಗಿದೆ.
ಕರಿಯಪ್ಪ ಅವರ ಧಾರವಾಡದ ಮನೆ, ಕಚೇರಿ, ಸಲೀಂ ಸಾಧು ಸಾಬ್ ಸೈಯದ್ ಅವರ ಬೆಳಗಾವಿಯ ರಾಮತೀರ್ಥ ನಗರದಲ್ಲಿನ ನಿವಾಸ, ಹಿರೇಬಾಗೇವಾಡಿಯ ಕಚೇರಿ, ನಾಗರಾಜ್ ಅವರ ಬಿಬಿಎಂಪಿ ಯೋಜನಾ ಕಚೇರಿ, ಕುಮಾರ್ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ಸ್ಥಳೀಯ ಎಸ್ಪಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳು ಇನ್ನಿತರ ಅಕ್ರಮ ಆಸ್ತಿಯ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನ‌ಡೆಸಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಕೆ.ವಿ. ಶರತ್‌ಚಂದ್ರ ಅವರು ತಿಳಿಸಿದ್ದಾರೆ.
ಕರುಣಾಕರ ಅವರ ಶಿವಮೊಗ್ಗದಲ್ಲಿನ ನಿವಾಸ, ಚಿತ್ರದುರ್ಗದಲ್ಲಿನ ಕಚೇರಿ, ಜಗನ್ನಾಥ್ ಅವರ ಬೀದರ್‌ನಲ್ಲಿನ ಕಚೇರಿ, ಮನೆ, ಶಿವಕುಮಾರ್ ‌ಡೊಳ್ಳನ ಅವರ ಗದಗದಲ್ಲಿನ ಕಚೇರಿ, ಮನೆಗಳ ಮೇಲೆ ಮುಂಜಾನೆಯಿಂದಲೇ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಅಕ್ರಮ ಆಸ್ತಿ-ಪಾಸ್ತಿಯ ಪರಿಶೀಲನೆ ಮಧ್ಯಾಹ್ನದವರೆಗೆ ನಡೆದಿದ್ದು, ಸಂಜೆ ವೇಳೆಗೆ ಒಟ್ಟಾರೆ ಮೌಲ್ಯ ಗೊತ್ತಾಗಲಿದೆ. ಬಲೆಗೆ ಬಿದ್ದಿರುವ ಎಲ್ಲಾ 7 ಮಂದಿ ಅಧಿಕಾರಿಗಳು ಆದಾಯಕ್ಕೂ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ-ಪಾಸ್ತಿ ಗಳಿಸಿರುವುದು ದಾಳಿಯ ವೇಳೆ ಕಂಡುಬಂದಿದೆ ಎಂದು ಅವರು ತಿಳಿಸಿದರು
-sanjevani

loading...

No comments