Breaking News

ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಇದಕ್ಕೆ ನನ್ನ ಬೆಂಬಲವಿದೆ; ಸಂಸದ ಅನಂತಕುಮಾರ


ಶಿರಸಿ: ಜಿಲ್ಲೆಯಲ್ಲಿ ವಸ್ತ್ರ ಸಂಹಿತೆ ಕಡ್ಡಾಯವಿರುವ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಬುರ್ಖಾ/ಸ್ಕಾರ್ಫ ಧರಿಸಲು ಅವಕಾಶ ಮಾಡಿಕೊಟ್ಟಿದ್ದೇ ಆದರೆ ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಿರಸಿ ಹಾಗೂ ಕುಮಟಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಶಾಲಾ-ಕಾಲೇಜುಗಳಲ್ಲಿ ಬುರ್ಖಾ ವಿವಾದವನ್ನು ಬಗೆಹರಿಸುವಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದನ್ನು ಖಂಡಿಸುವುದಾಗಿ ಸಂಸದ ಅನಂತಕುಮಾರ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಕೇವಲ ನಾಲ್ಕಾರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಸೆಡ್ಡು ಹೊಡೆದು ಬುರ್ಖಾ ಧರಿಸಿಕೊಂಡು ಬರುವುದನ್ನು ತಡೆಯಲಾಗದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಯಾವ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯ? ಕಾಲೇಜಿನಲ್ಲಿ ಎಲ್ಲರೂ ಸಮಾನರು, ಜಾತಿ, ಧರ್ಮ, ಮತ, ಪಂಥ, ಶ್ರೀಮಂತ,ಬಡವ ಮುಂತಾದ ತಾರತಮ್ಯ ವಿದ್ಯಾರ್ಥಿಗಳಲ್ಲಿ ಮೂಡಬಾರದೆಂಬ ಕಾರಣಕ್ಕಾಗಿಯೇ ಏಕರೂಪದ ವಸ್ತ್ರ ಸಂಹಿತೆ (ಯುನಿಫಾರ್ಮ) ಜಾರಿಗೆ ತರಲಾಗಿದೆ.

ಆದರೆ ಕಾಲೇಜು ಆಡಳಿತ ಮಂಡಳಿಯ ಮೃದು ಧೋರಣೆಯಿಂದಲೇ ಇದೊಂದು ವಿವಾದವಾಗಿ ಮಾರ್ಪಟ್ಟಿರುವುದು ವಿಷಾದನೀಯ! ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕೆಲವೇ ಕೆಲವು ವಿದ್ಯಾರ್ಥಿನಿಯರುಗಳಿಂದ ಕಾಲೇಜು ವಾತಾವರಣ ಹಾಳಾಗುತ್ತಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತರಿಗೊಂದು ಬಹುಸಂಖ್ಯಾತರಿಗೊಂದು ಕಾನೂನು ಎಂಬಂತೆ ತಿಳಿದುಕೊಂಡ ಅಧಿಕಾರಿಗಳ ಕಾರ್ಯಕ್ಷಮತೆಯು ಸಾರ್ವಜನಿಕರಿಂದ ಟೀಕೆಗೊಳಗಾಗಿದೆ. ಅಲ್ಪಸಂಖ್ಯಾತ ತುಷ್ಟೀಕರಣ ಕಾಲೇಜಿಗೂ ತಟ್ಟಿರುವುದು ವಿಷಾದನೀಯ.

ಪೊಲೀಸರು ಕಾಲೇಜುಗಳಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಅಪರಾಧಿಯಂತೆ ಬಿಂಬಿಸಲು ಹೊರಟಿರುವ ಕ್ರಮ ಸರಿಯಲ್ಲ. ವಿವಾದವನ್ನು ಅತ್ಯಂತ ಸೌಹಾರ್ದಯುತವಾಗಿ ಬಾಹ್ಯ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಬಗೆಹರಿಸಬೇಕೆಂದು ಕಾಲೇಜು ಆಡಳಿತ ಮಂಡಳಿಗೆ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

loading...

No comments